ದ.ಕ., ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಪೊಲೀಸ್ ಕ್ರಮ ಜಾರಿ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

►ಮೂರು ಕೊಲೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ

- Advertisement -

ಬೆಂಗಳೂರು: ಮಸೂದ್, ಪ್ರವೀಣ್ ಮತ್ತು ಫಾಝಿಲ್ ಕೊಲೆಗಳು ನಡೆಯಬಾರದಿತ್ತು. ಈ ಮೂರು ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಕ್ರಮಕೈಗೊಳ್ಳಬೇಕಾಗಿರುವುದರಿಂದ ಶುಕ್ರವಾರ ಡಿಜಿ-ಐಜಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಅಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನಿನ್ನೆ ಸುಳ್ಯಕ್ಕೆ ಭೇಟಿ ನೀಡಿ ವಿಮಾನ ನಿಲ್ದಾಣಕ್ಕೆ ಬರುವಷ್ಟರದಲ್ಲಿ ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಯುವಕನ ಕೊಲೆ ನಡೆದಿದೆ. ನಮಗೆ ಪ್ರತಿಯೊಬ್ಬ ನಾಗರಿಕರ ಜೀವ ಕೂಡ ಮುಖ್ಯ. ಕೊಲೆಗಳು ನಡೆಯಬಾರದು. ಎಡಿಜಿಪಿಯವರನ್ನು ಅಲ್ಲೇ ಇರಲು ಸೂಚಿಸಿದ್ದೇನೆ. ಮೂರೂ ಕೊಲೆಗಳ ಬಗ್ಗೆ ತನಿಖೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

- Advertisement -

ಕೇರಳ ಬಾರ್ಡರ್ ಮೂಲಕ ಮಂಗಳೂರು ಕಡೆಗೆ ಬರಲು ಸುಮಾರು 55 ರಸ್ತೆಗಳಿವೆ. ಆ ರಸ್ತೆಗಳನ್ನು ಯಾವ ರೀತಿ ನಿಭಾಯಿಸಬೇಕು ಎಂಬುದರ ಬಗ್ಗೆ ಇಂದಿನ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ವಿಶೇಷವಾದ ಪೊಲೀಸ್ ಕ್ರಮಗಳನ್ನು ಈ ಎರಡೂ ಜಿಲ್ಲೆಗಳಲ್ಲಿ ಜಾರಿಗೊಳಿಸಲು ತೀರ್ಮಾನ ಮಾಡುತ್ತೇವೆ. ಅಧಿಕಾರಿಗಳ ಸಲಹೆ, ಸೂಚನೆ ತೆಗೆದುಕೊಂಡು ಇಂದೇ ಆದೇಶ ನೀಡುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸಿದ್ದರಾಮಯ್ಯ ಅವರು ಇದ್ದಾಗ 32 ಸರಣಿ ಕೊಲೆಗಳಾಗಿವೆ. ಎಲ್ಲವನ್ನೂ ರಾಜಕಾರಣದಿಂದ ನೋಡಬಾರದು. ಅವರ ಹೇಳಿಕೆಗೆ ಯಾವುದೇ ಮಹತ್ವವಿಲ್ಲ. ಹೇಗೆ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂಬುದು ನಮಗೆ ಗೊತ್ತಿದೆ. ಮೊದಲ ಕೊಲೆಯ ಆರೋಪಿಗಳೆಲ್ಲರನ್ನೂ ಬಂಧಿಸಲಾಗಿದೆ. ಎರಡನೇ ಕೊಲೆಯಲ್ಲಿ ಬಂಧನ ನಡೆಯುತ್ತಿದೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರು ನಮ್ಮ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬುದನ್ನು ಒಪ್ಪಿಕೊಂಡ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆಯನ್ನು ನಾನು ಕೊಲೆ ಎಂದು ನೋಡುತ್ತಿಲ್ಲ. ಇದೊಂದು ಸಂಘಟಿತ ಕೊಲೆ, ಅದರ ಹಿಂದಿರುವ ಸಂಘಟನೆಯನ್ನು ಸದೆಬಡಿಯುವ ಮಹತ್ವದ ಕ್ರಮಕೈಗೊಳ್ಳುತ್ತೇವೆ, ಕೆಲವು ದಿನ ಕಾದು ನೋಡಿ ಕ್ರಮ ಏನೆಂದು ನಿಮಗೆ ಸ್ಪಷ್ಟವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿದ್ದರಾಮಯ್ಯ ಹೇಳಿದ್ದು ವೇದವಾಕ್ಯವಲ್ಲ. ನಾವೆಲ್ಲಾ ಏನೆಲ್ಲಾ ಕ್ರಮಕೈಗೊಂಡಿದ್ದೇವೆ ಎಂಬುದು ಜನರ ಮುಂದಿದೆ. ಅಷ್ಟೇ ಶೀಘ್ರಗತಿಯಲ್ಲಿ ಕ್ರಮ ಕೂಡ ಕೈಗೊಂಡಿದ್ದೇವೆ. ಇಂತಹ ಅಪರಾಧ ಕೃತ್ಯಗಳೆಲ್ಲಾ ನಡೆಯಬಾರದು. ಸಮಾಜಘಾತುಕ ಶಕ್ತಿಗಳಿಗೆ ಕೆಲವರು ಕುಮ್ಮಕ್ಕು ನೀಡಿದ್ದಾರೆ. ಇದರ ಹಿಂದೆ ರಾಜಕೀಯ ಪ್ರೇರಣೆ ಕೂಡ ಇದೆ. ಕೇರಳದಿಂದ ಗಡಿ ದಾಟಿ ಬರುವ ಘಟನೆಗಳು ನಡೆಯುತ್ತಿವೆ. ಇವೆಲ್ಲವನ್ನೂ ನಿಗ್ರಹಿಸಲು ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಫಾಝಿಲ್ ಕೊಲೆಯ ಆರೋಪಿಗಳ ಬಗ್ಗೆ ನನಗೆ ಬಂದಿಲ್ಲ, ತನಿಖಾಧಿಕಾರಿಗಳಿಗೆ ಗೊತ್ತಿರಬಹುದು. ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳಿಗೆ ಬಿಜೆಪಿ ಫಂಡಿಂಗ್ ಮಾಡುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, ಇದು ಅತ್ಯಂತ ಹಾಸ್ಯಾಸ್ಪದ ಹೇಳಿಕೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಯೋಗಿ ಮಾದರಿಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ಕಾಂಗ್ರೆಸ್ ನದ್ದು ದ್ವಂದ್ವ ನೀತಿ. ಒಂದು ಕಡೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳುತ್ತಾರೆ ಮತ್ತೊಂದೆಡೆ ಯು.ಪಿ.ಮಾಡೆಲ್ ಅನ್ನು ವಿರೋಧಿಸುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು.

Join Whatsapp