►ದಾವಣಗೆರೆ, ಚಿಕ್ಕಮಗಳೂರು ಮತ್ತು ಮಡಿಕೇರಿಯಲ್ಲಿ ಉಪನ್ಯಾಸಕರಿಂದ ಕೋರ್ಟ್ ಆದೇಶ ಉಲ್ಲಂಘನೆ ?
►ಹಿಜಾಬ್ ತೆಗೆಸಿದ ಕಾರಣಕ್ಕೆ ರಾಜೀನಾಮೆ ನೀಡಿದ ತುಮಕೂರು ಉಪನ್ಯಾಸಕಿ ಚಾಂದಿನಿ!
ಬೆಂಗಳೂರು : ಹಿಜಾಬ್ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತೀರ್ಪಿನಲ್ಲಿ ಯಾವುದೇ ಧಾರ್ಮಿಕ ಸಂಕೇತಗಳನ್ನು ಕಾಲೇಜು ತರಗತಿಯ ಒಳಗೆ ಪ್ರದರ್ಶಿಸುವಂತಿಲ್ಲ ಎಂದು ಹೇಳಿತ್ತು. ಆ ಬಳಿಕ ಹಿಜಾಬ್ ಧರಿಸಿ ಬಂದ ಮುಸ್ಲಿಮ್ ಹೆಣ್ಣುಮಕ್ಕಳಿಗೆ ತರಗತಿಯ ಒಳಗೆ ಅನುಮತಿ ನೀಡಿರಲಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಹೈಕೋರ್ಟ್ ಆದೇಶದಂತೆ ಅಧ್ಯಾಪಕರು ಮುಸ್ಲಿಮ್ ಹೆಣ್ಣುಮಕ್ಕಳು ಹಿಜಾಬ್ ತೆಗೆದು ಬರಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಈ ವೇಳೆ ಸ್ವತಃ ಅಧ್ಯಾಪಕರೇ ಧಾರ್ಮಿಕ ಸಂಕೇತಗಳನ್ನು ಧರಿಸುತ್ತಿರುವುದು ಕಂಡು ಬಂದಿದೆ.
ಧಾರ್ಮಿಕ ಸಂಕೇತಗಳೆಂದರೆ ಕೇವಲ ಹಿಜಾಬ್ ಮಾತ್ರವಲ್ಲ, ಕೇಸರಿ ಶಾಲು, ಸಿಂಧೂರ, ಬಿಂದಿ, ಹಣೆ ಬೊಟ್ಟು, ಕೈಗೆ ಕಟ್ಟುವ ಕೇಸರಿ ನೂಲು, ಮದುವೆಯಾದ ಹಿಂದೂ ಮಹಿಳೆಯರು ಧರಿಸುವ ಕರಿಯಮಣಿ ಸರ ಇವೆಲ್ಲವೂ ಕೋರ್ಟ್ ಆದೇಶದಲ್ಲಿ ಸೇರುತ್ತದೆ ಎನ್ನುವುದು ಗಮನಾರ್ಹವಾಗಿದೆ. ಆದರೆ ಇದನ್ನು ಧಿಕ್ಕರಿಸಿ ಕೆಲ ಅಧ್ಯಾಪಕರು ತಾವು ತಮ್ಮ ಧರ್ಮದ ಧಾರ್ಮಿಕ ಸಂಕೇತಗಳನ್ನು ಧರಿಸಿಕೊಂಡೇ ಮುಸ್ಲಿಮ್ ಹೆಣ್ಣು ಮಕ್ಕಳ ಹಿಜಾಬ್ ತೆಗೆಯಲು ಉತ್ಸುಕತೆ ತೋರಿಸುತ್ತಿರುವುದು ವಿಪರ್ಯಾಸವಾಗಿದೆ. ಕೋರ್ಟ್ ಆದೇಶ ಹೊರಬಿದ್ದ ಮರುದಿನವೇ ಮಂಡ್ಯದ ಕಾಲೇಜೊಂದರಲ್ಲಿ ಮುಸ್ಲಿಮ್ ಅಧ್ಯಾಪಕಿಯ ಬುರ್ಖಾವನ್ನು ಕಾಲೇಜು ಗೇಟ್ ಬಳಿಯೇ ತೆಗೆಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಈ ನಡುವೆ ಮಡಿಕೇರಿ ನೆಲ್ಯಹುದಿಕೇರಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದಂತಹಾ ಅಂಟೋನಿಯವರು ತಮ್ಮ ಧಾರ್ಮಿಕ ಸಂಕೇತವನ್ನು ಧರಿಸಿಕೊಂಡೇ ಹೆಣ್ಣುಮಕ್ಕಳ ಹಿಜಾಬ್ ತೆಗೆಯಬೇಕೆಂಬ ಕೋರ್ಟ್ ಆದೇಶ ಪಾಲನೆ ಮಾಡಬೇಕೆಂದು ಪೋಷಕರಿಗೆ ಹೇಳುತ್ತಿರುವುದು ವೀಡಿಯೋ ದಲ್ಲಿ ಕಂಡು ಬಂದಿತ್ತು.
ದಾವಣಗೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಕೂಡಾ ತಮ್ಮ ಧಾರ್ಮಿಕ ಸಂಕೇತಗಳಾದಂತಹಾ ಬಿಂದಿ ಮತ್ತು ಕರಿಯಮಣಿ ಧರಿಸಿಕೊಂಡೇ ಹಿಜಾಬ್ ಧರಿಸಿ ಬಂದ ಮುಸ್ಲಿಮ್ ಹೆಣ್ಣುಮಕ್ಕಳ ಕಾಲೇಜು ಪ್ರವೇಶವನ್ನು ತಡೆದಿರುವ ದೃಶ್ಯಗಳನ್ನು ಮಾಧ್ಯಮಗಳು ಬಿತ್ತರಿಸಿದ್ದವು.
ಅದೇ ರೀತಿ ಚಿಕ್ಕಮಗಳೂರಿನ ಮಲೆನಾಡು ಶಿಕ್ಷಣ ಸಂಸ್ಥೆಯಲ್ಲಿ ಕೂಡಾ ಮಹಿಳಾ ಉಪನ್ಯಾಸಕರೊಬ್ಬರು ಹಿಜಾಬ್ ಧರಿಸಿಕೊಂಡು ಬಂದಿದ್ದ ಮುಸ್ಲಿಮ್ ಹೆಣ್ಣುಮಕ್ಕಳನ್ನು ಬಹಳ ಕಟುವಾಗಿ ಪ್ರಶ್ನಿಸುತ್ತಿರುವ ದೃಶ್ಯ ಕಂಡು ಬಂದಿತ್ತು. ಆದರೆ ಇದೇ ವೇಳೆ ಅವರು ಮಾತ್ರ ಕರಿಯಮಣಿ ಮತ್ತು ಬಿಂದಿ ಧರಿಸಿಕೊಂಡೇ ಅಲ್ಲಿದ್ದದ್ದು ಸ್ಪಷ್ಟವಾಗಿ ವೀಡೀಯೋ ದೃಶ್ಯಗಳಲ್ಲಿ ಕಂಡು ಬಂದಿತ್ತು.
ಅಧ್ಯಾಪಕರಿಗೂ ಕೋರ್ಟ್ ಆದೇಶ ಅನ್ವಯವಾಗುತ್ತದೆಯೇ ಎನ್ನುವುದಕ್ಕೆ ಸ್ಪಷ್ಟತೆ ಇಲ್ಲದಿದ್ದರೂ ತುಮಕೂರಿನ ಜೈನ್ ಪಿಯು ಕಾಲೇಜಿನಲ್ಲಿ ಮುಸ್ಲಿಮ್ ಅತಿಥಿ ಉಪನ್ಯಾಸಕರೊಬ್ಬರಿಗೆ ಹಿಜಾಬ್ ಧರಿಸಿದ ಕಾರಣಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ಸಂಸ್ಥೆಯ ನಿರ್ಧಾರವನ್ನು ವಿರೋಧಿಸಿ ಉಪನ್ಯಾಸಕಿ ಚಾಂದಿನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮುಸ್ಲಿಮ್ ಉಪನ್ಯಾಸಕರು ಹಿಜಾಬ್ ಧರಿಸಿಕೊಂಡು ಬರುವುದು ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆಯೆಂದಾದರೆ, ಬಿಂದಿ ಮತ್ತು ಕರಿಯಮಣಿ ಧರಿಸಿಕೊಂಡು ಬರುವುದೂ ಕೂಡಾ ಕೋರ್ಟ್ ಆದೇಶ ಉಲ್ಲಂಘನೆಯಂತೆಯಾಗುತ್ತದೆ. . ಹೀಗಾಗಿ ದಾವಣಗೆರೆ , ಚಿಕ್ಕಮಗಳೂರು ಮತ್ತು ಮಡಿಕೇರಿಯ ಉಪನ್ಯಾಸಕರ ವಿರುದ್ಧ ಕೋರ್ಟ್ ಆದೇಶ ಉಲ್ಲಂಘನೆಯ ಕುರಿತು ದೂರು ದಾಖಲಿಸಬೇಕಾಗಿದೆ ಎಂಬ ಕೂಗು ಸಾರ್ವಜನಿಕ ವಲಯದಿಂದ ಎದ್ದಿದೆ.