ನಮ್ಮ ಆದೇಶ ಕೇವಲ CDC ಇರುವ ಪದವಿಪೂರ್ವ ಕಾಲೇಜಿಗೆ ಮಾತ್ರ ಅನ್ವಯ: ಉಳಿದೆಡೆ ಹಿಜಾಬ್ ಗೆ ನಿಷೇಧ ಹೇರಿದರೆ ನಮ್ಮ ಗಮನಕ್ಕೆ ತನ್ನಿ: ಹೈಕೋರ್ಟ್ ಸಿಜೆ

Prasthutha|

►ಕಿರುಕುಳಕ್ಕೆ ಒಳಗಾದವರಿಂದ ಪತ್ರ ಕೊಡಿಸಿ ಎಂದ ಪೀಠ

- Advertisement -

ಬೆಂಗಳೂರು: ನಮ್ಮ ಆದೇಶ ಕೇವಲ ಸಿಡಿಸಿ (ಕಾಲೇಜು ಅಭಿವೃದ್ಧಿ ಸಮಿತಿ) ಇರುವ ಪದವಿಪೂರ್ವ ಕಾಲೇಜಿಗೆ ಮಾತ್ರ ಅನ್ವಯ. ಅದನ್ನು ಹೊರತುಪಡಿಸಿ ಯಾವುದೇ ಪದವಿ ಕಾಲೇಜು ಅಥವಾ ಹೈಸ್ಕೂಲ್ ಅಥವಾ ಅಲ್ಪಸಂಖ್ಯಾತ ಇಲಾಖೆಯ ಅಧೀನದ ಶಾಲೆಗಳಲ್ಲಿ ಹಿಜಾಬ್ ಗೆ ತಡೆ ಹೇರಿದರೆ ಅಂತಹ ಘಟನೆಗಳ ಮತ್ತು ವ್ಯಕ್ತಿ ಅಥವಾ ಇಲಾಖೆಗಳ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಬೇಕು ಎಂದು ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿ ಸೂಚನೆ ನೀಡಿದ್ದಾರೆ.

ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಯವರ ತ್ರಿ ಸದಸ್ಯ ಪೀಠ ಶುಕ್ರವಾರ ಈ ಸೂಚನೆ ನೀಡಿದೆ. ವಿಚಾರಣೆಯ ಕೊನೆಯಲ್ಲಿ ಅರ್ಜಿದಾರರ ಪರ ವಕೀಲ ತಾಹಿರ್ ಅವರು ರಾಜ್ಯಾದ್ಯಂತ ಶಿಕ್ಷಕರ ಸಮೇತ ಹಲವು ಕಾಲೇಜುಗಳಲ್ಲಿ ಹಿಜಾಬ್ ಧರಿಸಿದವರನ್ನು ಅಕ್ರಮವಾಗಿ ತಡೆಯಲಾಗುತ್ತಿದೆ.

- Advertisement -

ಕಾಲೇಜಿನ ಗೇಟುಗಳಲ್ಲಿ ಪೊಲೀಸರನ್ನು ನಿಯೋಜಿಸಿ ಒತ್ತಡ ತರಲಾಗುತ್ತಿದೆ ಎಂದು ನ್ಯಾಯಾಲಯದ ಗಮನ ಸೆಳೆದರು. ಆಗ ಮುಖ್ಯ ನ್ಯಾಯಮೂರ್ತಿ, ನಮ್ಮ ಆದೇಶ ಸ್ಪಷ್ಟವಾಗಿದೆ. ನೀವು ಹೇಳಿದ ರೀತಿಯಲ್ಲಿ ಸಮಸ್ಯೆ ಇದ್ದರೆ ವರದಿ ಕೊಡಿ, ಮೆಮೋ ಕಳಿಸಿ ಎಂದರು.

ಮೈನಾರಿಟಿ ಇಲಾಖೆಯ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡಬೇಕಾಗಿಲ್ಲ. ಅದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯದ ಮೌಖಿಕ ಹೇಳಿಕೆಯಿಂದ ಸ್ಪಷ್ಟವಾಗಿದೆ.

ವಿಚಾರಣೆಯ ಕೊನೆಯಲ್ಲಿ ನಡೆದ ಬೆಳವಣಿಗೆ:

ವಕೀಲ ತಾಹೀರ್‌: ಸಿಡಿಸಿಗಳು ಸಮವಸ್ತ್ರ ಸೂಚಿಸಿರುವ ಕಡೆ ಮಾತ್ರ ಮಧ್ಯಂತರ ಆದೇಶ ಅನ್ವಯಿಸುತ್ತದೆ ಎಂದು ಹೇಳಲಾಗಿದೆ. ಈಗ ಸರ್ಕಾರ ಆದೇಶವನ್ನು ಎಲ್ಲಾ ಶಾಲೆ, ಪದವಿ ಕಾಲೇಜುಗಳಿಗೆ ವಿಸ್ತರಿಸಿದೆ. ಸಮವಸ್ತ್ರ ಇರುವ ಸರ್ಕಾರದ ಕಾಲೇಜುಗಳಿಗೆ ಮಾತ್ರ ಸೀಮಿತಗೊಳಿಸಿಲ್ಲ.

ವಕೀಲ ತಾಹೀರ್‌: ನ್ಯಾಯಾಲಯದ ಆದೇಶದಿಂದ ಮುಸ್ಲಿಮ್‌ ಸಮುದಾಯ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಪ್ರತಿ ಇಲಾಖೆಯೂ ಭಿನ್ನವಾಗಿ ಆದೇಶವನ್ನು ವ್ಯಾಖ್ಯಾನಿಸುತ್ತಿವೆ. ಮುಸ್ಲಿಮ್‌ ವಿದ್ಯಾರ್ಥಿಗಳೇ ಇರುವ ಉರ್ದು ಶಾಲೆಗಳಲ್ಲೂ ನ್ಯಾಯಾಲಯದ ಆದೇಶ ಜಾರಿ ಮಾಡಲಾಗಿದೆ.

ತಾಹೀರ್:‌ ಕಾನೂನು, ಸುವ್ಯವಸ್ಥೆ ದೃಷ್ಟಿಯಿಂದ ಆದೇಶ ಮಾಡಲಾಗಿದೆ. ಆದರೆ, ಇದು ಅದೇ ಸಮಸ್ಯೆ ಸೃಷ್ಟಿಸುತ್ತಿದೆ. ಮುಸ್ಲಿಮ್‌ ಮಹಿಳೆಯರ ಬುರ್ಖಾ, ಶಿರವಸ್ತ್ರ ತೆಗೆಯುವುದಕ್ಕೆ ಸಂಬಂಧಿಸಿದಂತೆ ಬೆದರಿಸಲು ಪೊಲೀಸ್‌ ಪಡೆಯನ್ನು ನಿಯೋಜಿಸಲಾಗುತ್ತಿದೆ.

ಎಜಿ: ಅವರು ವಿವರಣೆ ನೀಡಲಿ. ನಿಮ್ಮ ಮಧ್ಯಂತರ ಆದೇಶ ಮೀರಿ ಯಾರೂ ನಡೆದುಕೊಳ್ಳಬಾರದು ಎಂಬುದನ್ನು ನಾವು ಖಾತರಿಪಡಿಸುತ್ತೇವೆ. ನ್ಯಾಯಾಲಯದ ಆದೇಶ ಮೀರಿ ಕಾರ್ಯನಿರ್ವಹಿಸಲು ನಾವು ಅವಕಾಶ ನೀಡುವುದಿಲ್ಲ. ಸಮಸ್ಯೆಗಳಿದ್ದರೆ ಅವುಗಳ ಬಗ್ಗೆ ಲಿಖಿತವಾಗಿ ನಮಗೆ ತಿಳಿಸಿ. ನಾವು ಅಂತಹವರಿಗೆ ಸೂಕ್ತ ನಿರ್ದೇಶನ ನೀಡುತ್ತೇವೆ. ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ಜಾರಿಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಬಳಿಕ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

Join Whatsapp