ಬೆಂಗಳೂರು : ಸಿಎಂ ಯಡಿಯೂರಪ್ಪ ಈಗ ಸಚಿವ ಸಂಪುಟದಲ್ಲೂ ಅಸಮಾಧಾನ ಎದುರಿಸಬೇಕಾಗಿ ಬಂದಿದೆ. ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ, ತಮ್ಮಲ್ಲಿದ್ದ ಖಾತೆಗಳನ್ನು ಕಳೆದುಕೊಂಡ ಸಚಿವರುಗಳು ಸಿಎಂ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ತಮ್ಮಲ್ಲಿದ್ದ ಕಾನೂನು, ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಖಾತೆಯನ್ನು ಹಿಂಪಡೆದು, ವೈದ್ಯಕೀಯ ಶಿಕ್ಷಣ, ಕನ್ನಡ ಸಂಸ್ಕೃತಿ ಇಲಾಖೆ ನೀಡಿರುವ ಬಗ್ಗೆ ಸಚಿವ ಮಾಧುಸ್ವಾಮಿ ಗರಂ ಆಗಿದ್ದಾರೆ. ಸಿಎಂ ವಿರುದ್ಧ ಮುನಿಸಿಕೊಂಡಿರುವ ಅವರು ಸಂಪುಟ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ತಮ್ಮಲ್ಲಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದುಕೊಂಡಿರುವುದಕ್ಕೆ ಆರೋಗ್ಯ ಸಚಿವ ಕೆ. ಸುಧಾಕರ್ ಕೂಡ ಗರಂ ಆಗಿದ್ದಾರೆ. ಸಿಎಂ ಬಳಿ ತಮ್ಮ ಅಸಮಾಧಾನ ಹೇಳಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆಹಾರ ಖಾತೆ ಸಚಿವರಾಗಿದ್ದ ಗೋಪಾಲಯ್ಯ ಅವರಿಗೆ ಸಕ್ಕರೆ ಮತ್ತು ಪರಿಸರ ಇಲಾಖೆ ನೀಡಲಾಗಿದೆ. ಇದರಿಂದಾಗಿ ಅವರಿಗೂ ಬೇಸರವಾಗಿದೆ. ವಸತಿ ಖಾತೆಯ ಮೇಲೆ ಕಣ್ಣಿಟ್ಟಿದ್ದ ಎಂಟಿಬಿ ನಾಗರಾಜ್ ಗೆ ನಿರಾಸೆಯಾಗಿದೆ. ಎಂಟಿಬಿ ನಾಗರಾಜ್ ಗೆ ಅಬಕಾರಿ ಖಾತೆ ನೀಡಿದ್ದು, ವಸತಿ ಖಾತೆಗಾಗಿ ಅವರು ಪಟ್ಟು ಹಿಡಿದಿದ್ದಾರೆ ಎಂದು ವರದಿಗಳು ತಿಳಿಸಿವೆ.
ತಮಗೆ ಸಣ್ಣ ನೀರಾವರಿ ಖಾತೆ ನೀಡದಿದ್ದಲ್ಲಿ ರಾಜೀನಾಮೆ ನೀಡುವುದಾಗಿ ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾಗುತ್ತಿದೆ.