►ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಜಾತ್ಯತೀತ ಜನತಾದಳ ಪಕ್ಷದ ರಾಜ್ಯ ಮಟ್ಟದ ಸಾಂಸ್ಥಿಕ ಚುನಾವಣೆ ಪೂರ್ಣಗೊಂಡಿದ್ದು, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಲ್ಲದೆ, ಪಕ್ಷದ ರಾಜ್ಯ ಕಾರ್ಯಕಾರಿಣಿ ಮಂಡಳಿಯ ಸದಸ್ಯರಾಗಿ 65 ಮಂದಿ ಆಯ್ಕೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿ ಹೆಚ್.ಸಿ.ನೀರಾವರಿ ಅವರು ಪ್ರಕಟಿಸಿ ಆಯ್ಕೆ ಪ್ರಮಾಣ ಪತ್ರ ನೀಡಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಎಚ್.ಸಿ.ನೀರಾವರಿ ಅವರನ್ನು ಹೆಚ್.ಡಿ.ಕುಮಾರಸ್ವಾಮಿ, ಬಂಡೆಪ್ಪ ಕಾಷೆಂಪೂರ್, ಎನ್.ಎಂ.ನಬಿ, ರಾಜಾ ವೆಂಕಟಪ್ಪ ನಾಯಕ ಮುಂತಾದವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; ರಾಜ್ಯದ ಸಾಂಸ್ಥಿಕ ಚುನಾವಣೆ ಪೂರ್ಣವಾಗಿ ಮತ್ತು ನಿಯಮಬದ್ಧವಾಗಿ ನಡೆಸಿದ ಹೆಚ್.ಸಿ.ನೀರಾವರಿ ಅಭಿನಂದನೆಗಳು. ಈವರೆಗೆ ಈ ಚುನಾವಣೆಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ನೋವು ದೇವೇಗೌಡರಿಗೆ ಇತ್ತು. ಆ ಕೊರತೆಯನ್ನು ನೀರಾವರಿ ಅವರು ನೀಗಿಸಿದ್ದಾರೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಸಿ.ಎಂ.ಇಬ್ರಾಹಿಂ ಅವರು ಆಯ್ಕೆಯಾಗಿದ್ದಾರೆ. ಹಾಗೆಯೇ 65 ಜನ ನಾಯಕರು ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ರಾಹಿಂ ಅವರು ಹಿಂದೆ ಅಧ್ಯಕ್ಷರಾಗಿದ್ದಾಗ ಪಕ್ಷ ಅಭೂತಪೂರ್ವ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. ಈಗ ಅದೇ ಇತಿಹಾಸ ಮರುಕಳಿಸಲಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಭಾವುಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ:
ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲರೂ ಪಕ್ಷ ಕಟ್ಟಬೇಕು. ಇನ್ನು ಮುಂದೆ ಹಗಲಿರುಳು ಪಕ್ಷ ಕಟ್ಟುವ ಕೆಲಸವನ್ನು ಎಲ್ಲರೂ ಮಾಡಬೇಕು. ಯಾರೂ ವಿಶ್ರಮಿಸಬಾರದು. ಈ ಸಭೆ ಅವರ ಸಮ್ಮುಖದಲ್ಲಿ ನಡೆಯಬೇಕಿತ್ತು ಎಂದು ಕುಮಾರಸ್ವಾಮಿ ಅವರು ತಮ್ಮ ತಂದೆಯವರನ್ನು ನೆನಪಿಸಿಕೊಂಡು ಭಾವುಕರಾದರು. ತಂದೆಯವರ ಆರೋಗ್ಯವನ್ನು ನೆನಪಿಸಿಕೊಂಡು ಸಭೆಯಲ್ಲಿ ಕಣ್ಣೀರಿಟ್ಟರು.
ಪ್ರತಿದಿನ ನನ್ನೆಲ್ಲಾ ಕಾರ್ಯಕ್ರಮ ಮುಗಿಸಿಕೊಂಡು ತಂದೆಯವರಲ್ಲಿಗೆ ಓಡುತ್ತೇನೆ. ಅವರ ಆರೋಗ್ಯವೇ ಮುಖ್ಯವಾಗಿದೆ. ನನಗೆ ಅಧಿಕಾರಕ್ಕಿಂತ ನಮ್ಮ ತಂದೆಯವರ ಆರೋಗ್ಯ ಮುಖ್ಯ. ನನಗೆ ತಂದೆಗಿಂತ ಮುಖ್ಯಮಂತ್ರಿ ಪದವಿ ದೊಡ್ಡದಲ್ಲ ಎಂದು ಕಣ್ಣೀರಿಟ್ಟ ಕುಮಾರಸ್ವಾಮಿ ಅವರನ್ನು ಇಬ್ರಾಹಿಂ ಹಾಗೂ ವೇದಿಕೆ ಮೇಲಿದ್ದ ಎಲ್ಲ ನಾಯಕರು ಸಂತೈಸಿದರು.
ಮುಂದುವರಿದು ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; 2006ರಲ್ಲಿ ಬಿಜೆಪಿ ಜತೆ ಸರಕಾರ ಮಾಡಿದೆ. ನಮ್ಮ ತಂದೆ ಅವರ ಆರೋಗ್ಯ ಹದಗೆಟ್ಟಿದ್ದು ಆಗಲೇ. ಅದರ ನೋವು ಎಂಥದು ಎನ್ನುವುದು ನನಗೆ ಈಗ ಅರ್ಥವಾಗುತ್ತಿದೆ. ಸ್ವತಂತ್ರ ಸರಕಾರ ಬರಬೇಕು ಎನ್ನುವುದು ದೊಡ್ಡವರ ಕನಸು. ಆ ಕನಸನ್ನು ನನಸು ಮಾಡಬೇಕು. ಇದೆಲ್ಲ ನಮ್ಮೆಲ್ಲರ ಹೊಣೆ ಎಂದು ಅವರು ಹೇಳಿದರು.
ಸಿದ್ದರಾಮೋತ್ಸವ ಸಪ್ಪೆ:
ಕಾಂಗ್ರೆಸ್ ಪಕ್ಷ ದಾವಣಗೆರೆ ಸಮಾವೇಶ ಬಗ್ಗೆ ಮಾತನಾಡಿದ ಅವರು, ಅಲ್ಲಿ ಆ ಪಕ್ಷದ ಮೂಲ ನಾಯಕರು ಅಕ್ಕಪಕ್ಕದಲ್ಲಿ ಕೈಕಟ್ಟಿಕೊಂಡು ನಿಂತಿದ್ದರು. ಬೇರೆ ಪಕ್ಷಗಳಿಂದ ವಲಸೆ ಹೋಗಿರುವ ಮಿಂಚುತ್ತಿದ್ದಾರೆ. ನಮ್ಮ ಜಲಧಾರೆ ಸಮಾವೇಶದ ಮುಂದೆ ಸಿದ್ದರಾಮೋತ್ಸವ ಸಪ್ಪೆಯಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತಿಂಗಳುಗಟ್ಟಲೆ ಸಿದ್ಧತೆ ನಡೆಸಿದರೂ ಅದರ ಸಮಾವೇಶ ವಿಫಲವಾಗಿದೆ. ಅದರ ಶಕ್ತಿ ಪ್ರದರ್ಶನ ಏನೆಂಬುದು ಜನತೆಗೆ ಚೆನ್ನಾಗಿ ಗೊತ್ತಾಗಿದೆ. ಆದರೆ, ನಮ್ಮ ಜಲಧಾರೆ ಮುಂದೆ ಅದು ಏನೂ ಅಲ್ಲ. ನಮ್ಮ ಕಾರ್ಯಕರ್ತರಿಗೆ ಶಕ್ತಿ ಇದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಶುಭ ಸೂಚನೆ ಎಂದ ಇಬ್ರಾಹಿಂ:
ಪಕ್ಷದ ನೂತನ ಅಧ್ಯಕ್ಷ ಇಬ್ರಾಹಿಂ ಅವರು ಮಾತನಾಡಿ; ಪಕ್ಷದ ಸಾಂಸ್ಥಿಕ ಚುನಾವಣೆ ಮುಗಿದು ನಾನು ಸೇರಿ ಕಾರ್ಯಕಾರಿಣಿ ಮಂಡಳಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುವುದು ಶುಭ ಸೂಚನೆ ಎಂದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ಹೇಳಿದರು.
ಈ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಎಲ್ಲ ಪದಾಧಿಕಾರಿಗಳು, ಕಾರ್ಯಕಾರಣಿ ಮಂಡಳಿ ನೂತನ ಸದಸ್ಯರು, ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.