ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿ ತಲವಾರು ದಾಳಿ ವದಂತಿ ಪ್ರಕರಣದ ಹಿಂದಿರುವ ಷಡ್ಯಂತ್ರ ಬಯಲಿಗೆಳೆಯುವಂತೆ ಎಸ್ ಡಿಪಿಐ ಒತ್ತಾಯಿಸಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತ ಕಿಶೋರ್ ಯಾನೆ ಕಿಚ್ಚು ಎಂಬಾತ ಇಂದು ತನ್ನ ಮೇಲೆ ಮೂವರು ತಲವಾರು ದಾಳಿ ನಡೆಸಲು ಯತ್ನಿಸಿದ್ದಾರೆ ಎಂಬ ವದಂತಿ ಹಬ್ಬಿಸಿ ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತು ಆತಂಕ ಸೃಷ್ಟಿಸಲು ಕಾರಣನಾಗಿದ್ದಾನೆ. ಈತ ವದಂತಿ ಹರಡಿರುವುದರ ಹಿಂದೆ ನಿಗೂಢ ಉದ್ದೇಶಗಳು ಇರುವ ಸಾಧ್ಯತೆಗಳಿದ್ದು ಇದರ ಹಿಂದೆ ಈತನಿಗೆ ಕೆಲವರು ಪ್ರೇರಣೆ ನೀಡಿ ಪ್ರದೇಶದಲ್ಲಿ ಕೋಮುಗಲಭೆ ಹುಟ್ಟು ಹಾಕಲು ಯತ್ನಿಸಿರುವ ಬಗ್ಗೆ ಸಂಶಯಗಳಿವೆ. ಆದ್ದರಿಂದ ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಪ್ರಕರಣದ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕೆಂದು ಒತ್ತಾಯಿಸಿ ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ ) ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ನಿಯೋಗ ಇಂದು ಸಹಾಯಕ ಪೊಲೀಸ್ ಆಯುಕ್ತರಾದ ದಿನಕರ್ ಶೆಟ್ಟಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ತಲವಾರು ದಾಳಿಯ ವಿಷಯ ಕ್ಷಣ ಮಾತ್ರದಲ್ಲಿ ಕಾಡ್ಗಿಚ್ಚಿನಂತೆ ಹರಡಿ ಕೆಲ ಮಾಧ್ಯಮಗಳಲ್ಲೂ, ಸಾಮಾಜಿಕ ಜಾಲ ತಾಣಗಳಲ್ಲೂ ಮುಳ್ಳುಗುಡ್ಡೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ತಲವಾರು ದಾಳಿಗೆ ಯತ್ನ ಎಂಬುವುದಾಗಿ ಪ್ರಸಾರವೂ ಆಗಿತ್ತು. ಆದರೆ ಪೊಲೀಸ್ ವಿಚಾರಣೆಯ ವೇಳೆಯಲ್ಲಿ ಕಿಶೋರ್ ಸುಳ್ಳು ವದಂತಿ ಹಬ್ಬಿಸಿದ್ದಾನೆ ಎಂದು ತಿಳಿದು ಬಂದ ನಂತರ ಜನರ ನಡುವಿನ ಆತಂಕ ಕಡಿಮೆಯಾಯಿತು. ಈ ಪ್ರಕರಣದಲ್ಲಿ ಆರೋಪಿಯ ಬಾಯಿಯಿಂದ ಸತ್ಯ ಬಿಡಿಸಿದ ಪೊಲೀಸರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಎಸ್ ಡಿಪಿಐ ನಿಯೋಗ ತಿಳಿಸಿದೆ.
ನಿಯೋಗದಲ್ಲಿ ಎಸ್ ಡಿಪಿಐ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ, ಕಾರ್ಯದರ್ಶಿ ಝಾಹಿದ್ ಮಲಾರ್, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್, ಕ್ಷೇತ್ರ ಸಮಿತಿ ಕೋಶಾಧಿಕಾರಿ ಲತೀಫ್ ಕೋಡಿಜಾಲ್, ಕೋಟೆಕಾರ್ ಪಟ್ಟಣ ಸಮಿತಿ ಅಧ್ಯಕ್ಷ ಮೊಯ್ದಿನ್ ಅಜ್ಜಿನಡ್ಕ, ಬಶೀರ್ ಅಜ್ಜಿನಡ್ಕ ಉಪಸ್ಥಿತರಿದ್ದರು.