ಬೆಂಳೂರು: ಬಿಬಿಎಂಪಿ ಕೆಲವು ಪ್ರದೇಶಗಳಲ್ಲಿ ಬೀದಿ ಬದಿ ಅಂಗಡಿಗಳ ತೆರವು ಕಾರ್ಯಾಚರಣೆ ಮಾಡುತ್ತಿದ್ದು, ಓರ್ವ ವ್ಯಾಪಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಘಟನೆ ಜಯನಗರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜಯನಗರದಲ್ಲಿ ಕಳೆದ 25 ವರ್ಷಗಳಿಂದ ತಾಯಿ ರತ್ನಮ್ಮ ಜೊತೆ ವ್ಯಾಪಾರ ಮಾಡುತ್ತಿದ್ದ ಕೃಷ್ಣ(49) ಮೃತ ವ್ಯಕ್ತಿ. ಮುಂದಕ್ಕೆ ವ್ಯಾಪಾರಕ್ಕೆ ಅವಕಾಶ ಇಲ್ಲದ ಕಾರಣ ಮನನೊಂದು ಹೃದಯಾಘಾತವಾಗಿದೆ.
ನವೆಂಬರ್ 07 ರಂದು ಬಿಬಿಎಂಪಿ ಮಾರ್ಷಲ್‌ಗಳ ತಂಡ ಜೆಸಿಬಿ ಮೂಲಕ ಜಯನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಇರುವ ಫುಟ್ಪಾತ್ನಲ್ಲಿದ್ದ ಅಕ್ರಮ ಶೆಡ್, ಬಟ್ಟೆ ಅಂಡಿಗಳನ್ನು ತೆರವುಗೊಳಿಸಿತ್ತು.ಇದರಿಂದಾಗಿ ಬೀದಿಬದಿ ವ್ಯಾಪಾರಿಗಳು ಅತಂತ್ರ ಸ್ಥಿತಿಯಲ್ಲಿದ್ದು, ಅಂಗಡಿಗಳ ತೆರವು ಕಾರ್ಯಕ್ಕೆ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆರವು ಕಾರ್ಯಾಚಾರಣೆ ಸಂಬಂಧವಾಗಿ ಮಾತನಾಡಿದ ಉಸ್ತುವಾರಿ ಅಧಿಕಾರಿ ಸೋಮಶೇಖರ್, ಸುಮಾರು 200 ಅನಧಿಕೃತ ಮಳಿಗೆಗಳನ್ನು ತೆಗೆದುಹಾಕಲಾಗಿದೆ. ಈ ಎಲ್ಲಾ ಬೀದಿ ಬದಿ ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದಾರೆ. ತೆರವು ಮಾಡಬೇಕು ಎಂದು 6 ತಿಂಗಳ ಹಿಂದೆ ಹೇಳಲಾಗಿತ್ತು. ಬಳಿಕ ಸುಮಾರು ಮೂರು ತಿಂಗಳ ಹಿಂದೆ ಮತ್ತೆ ಎಚ್ಚರಿಕೆ ನೀಡಿಲಾಗಿತ್ತು. ಅಷ್ಟೇ ಅಲ್ಲ, ನವೆಂಬರ್ 4 ರಂದು ನಾವು ಈ ಪ್ರದೇಶದಲ್ಲಿ ತೆರೆದ ಮೈಕ್ ಬಳಸಿ, ಅಕ್ರಮ ಮಳಿಗೆಗಳನ್ನು ತೆರವುಗೊಳಿಸುವುದಾಗಿ ಹೇಳಿದ್ದೆವು. ಅದರಂತೆ ತೆರವುಗೊಳಿಸಲಾಗಿದೆ ಎಂದಿದ್ದಾರೆ.