ಏಷ್ಯಾ ಕಪ್ ಪಂದ್ಯಾಟದ ವೇಳೆ ಘರ್ಷಣೆ: ಅಫ್ಘಾನ್ ಆಟಗಾರನ ಮೇಲೆ ಹಲ್ಲೆಗೆ ಮುಂದಾದ ಪಾಕ್ ಬ್ಯಾಟ್ಸ್’ಮ್ಯಾನ್

Prasthutha|

ದುಬೈ: ಏಷ್ಯಾ ಕಪ್ ಪಂದ್ಯಾಕೂಟದ ಪಾಕಿಸ್ತಾನ – ಅಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯದ ವೇಳೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಘರ್ಷಣೆ ಏರ್ಪಟ್ಟಿದ್ದು, ಪಾಕ್ ಆಟಗಾರ ಆಸಿಫ್ ಅಲಿ ಅವರು ಅಫ್ಘಾನ್ ಬೌಲರ್ ಫರೀದ್ ಅಹ್ಮದ್ ಅವರಿಗೆ ಬ್ಯಾಟ್ ಮೂಲಕ ಹಲ್ಲೆ ಮುಂದಾದ ಘಟನೆ ವರದಿಯಾಗಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಭಯ ಆಟಗಾರರ ವರ್ತನೆಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

ಪಂದ್ಯದ ವೇಳೆ ಪಾಕ್ ಆಟಗಾರ ಅಸಿಫ್ ಅಲಿ ಮತ್ತು ಅಫ್ಘಾನ್ ಬೌಲರ್ ಫರೀದ್ ಅಹ್ಮದ್ ಅವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, 19ನೇ ಓವರ್’ನಲ್ಲಿ ಅಸೀಫ್ ಅಲಿ ಔಟಾದಾಗ ಅಫ್ಘಾನ್ ಬೌಲರ್ ಫರೀದ್ ಅಹ್ಮದ್ ಅವರು ಅಸೀಫ್ ಅವರನ್ನು ಛೇಡಿಸಿದ್ದಾರೆ. ಇದರಿಂದ ಕೆರಳಿದ ಅಸೀಫ್ ಅಲಿ, ತನ್ನ ಬ್ಯಾಟನ್ನು ಫರೀದ್ ಅವರ ಮೇಲೆ ಬೀಸುತ್ತಾ ಹಲ್ಲೆಗೆ ಮುಂದಾಗಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಈ ಬೆಳವಣಿಗೆಯಿಂದಾಗಿ ಮೈದಾನದಲ್ಲಿ ಕೆಲವೊತ್ತು ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಹ ಆಟಗಾರರ ಮಧ್ಯಪ್ರವೇಶ ನಡೆಸಿ ಉಭಯ ಆಟಗಾರರನ್ನು ಬೇರ್ಪಡಿಸಿದ್ದಾರೆ. ಈ ಪಂದ್ಯ ಎರಡೂ ತಂಡಗಳಿಗೂ ಅತ್ಯಂತ ಮಹತ್ವ ಪಡೆದಿತ್ತು. ಅಫ್ಘಾನ್ ತಂಡ ಪಾಕ್ ವಿರುದ್ಧ ಸೋಲುತ್ತಿದ್ದಂತೆ ಎರಡೂ ತಂಡದ ಅಭಿಮಾನಿಗಳು ಗ್ಯಾಲರಿಯಲ್ಲಿ ರೊಚ್ಚಿಗೆದ್ದಿದ್ದು, ಪರಸ್ಪರ ಕುರ್ಚಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿರುವುದು ವೀಡಿಯೋದಲ್ಲಿ ಗೋಚರಿಸಿದೆ.

Join Whatsapp