►ಹಕ್ಕುಚ್ಯುತಿ ವಿಚಾರಣೆಗೆ ಒಪ್ಪಿಸಿದ ಸಭಾಪತಿ
ಬೆಳಗಾವಿ: ಕಾಂಗ್ರೆಸ್ ಸದಸ್ಯರು ನಿನ್ನೆ ಬೆಳಗಾವಿಯಲ್ಲಿ ಎತ್ತಿನಗಾಡಿಯ ಪ್ರತಿಭಟನೆ ನಡೆಸಿದಾಗ ತಡೆದು ನಿಲ್ಲಿಸಿದ ಪೊಲೀಸರ ವರ್ತನೆ ಇಂದು ವಿಧಾನ ಪರಿಷತ್ ನಲ್ಲಿ ಪ್ರತಿಧ್ವನಿಸಿ, ಹಕ್ಕುಚ್ಯುತಿ ಸಮಿತಿ ವಿಚಾರಣೆಗೆ ನೀಡಲಾಗಿದೆ.
ಈ ವೇಳೆ ಸಚಿವರ ಹಗುರವಾದ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದ ಪ್ರಸಂಗವೂ ನಡೆಯಿತು.
ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಿಸಿ, ಪೊಲೀಸ್ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು.
ನಿನ್ನೆ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ ಕಾಂಗ್ರೆಸ್ ಸದಸ್ಯರನ್ನು ಮೂರು ಗಂಟೆ ತಡೆದು ನಿಲ್ಲಿಸಿದ ಪೊಲೀಸರು, ನಮ್ಮನ್ನು ಒಳಗೆ ಬಿಟ್ಟಿಲ್ಲ. ಸುವರ್ಣ ಸೌಧದ ಎಲ್ಲಾ ಆಗು ಹೋಗುಗಳು ಸಭಾಪತಿ ಮತ್ತು ಸಭಾಧ್ಯಕ್ಷರ ಜವಾಬ್ದಾರಿ. ಪೊಲೀಸರು ಯಾವುದೇ ಪೂರ್ವಾನುಮತಿ ಇಲ್ಲದೆ ನಮ್ಮನ್ನು ತಡೆದು ನಿಲ್ಲಿಸುವ ಮೂಲಕ ಸಭಾಪತಿ ಅವರನ್ನು ಹಗುರವಾಗಿ ಪರಿಗಣಿಸಿದ್ದಾರೆ.
ನಾವು ಎತ್ತಿನಗಾಡಿಯಲ್ಲಿ ಬರುವುದನ್ನು ತಡೆದಿರುವುದು ಸರಿಯಲ್ಲ ಎಂದು ಎಸ್.ಆರ್.ಪಾಟೀಲ್ ಹೇಳಿದಾಗ, ಸಚಿವ ನಾರಾಯಣಗೌಡ ಅವರು, ನೀವು ದಿನವೂ ಎತ್ತಿನ ಗಾಡಿಯಲ್ಲಿ ಬರಬಹುದಲ್ಲ ಎಂದರು. ಈ ಹೇಳಿಕೆ ಪ್ರತಿಪಕ್ಷದ ಸದಸ್ಯರನ್ನು ಕೆರಳಿಸಿತು.
ಎಸ್.ಆರ್.ಪಾಟೀಲ್, ಎಂ,ನಾರಯಣಸ್ವಾಮಿ, ಬಿ.ಕೆ.ಹರಿಪ್ರಸಾದ್, ಪ್ರತಾಪ್ ಚಂದ್ರಶೆಟ್ಟಿ ಮತ್ತಿತರರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ನಾವು ಯಾವುದೇ ಗಾಡಿಯಲ್ಲಾದರೂ ಬರುತ್ತೇವೆ. ಅದನ್ನು ಕೇಳಲು ನೀವು ಯಾರು, ಮಂತ್ರಿ ಆಗಿರುವ ನಿಮಗೆ ಕನಿಷ್ಠ ಜ್ಞಾನ ಇಲ್ಲದೆ ಮಾತನಾಡುತ್ತಿರಾ. ಸಚಿವರಾಗಲು ಅರ್ಹತೆ, ಯೋಗ್ಯತೆ ನಿಮಗೆ ಇಲ್ಲ, ಮೈಮೇಲೆ ಪ್ರಜ್ಞೆ ಇಲ್ಲ. ಇಂತಹ ಅಯೋಗ್ಯ ಮಂತ್ರಿಯನ್ನು ನಾನು ನನ್ನ ಸಾರ್ವಜನಿಕ ಜೀವನದಲ್ಲಿ ನೋಡಿಲ್ಲ ಎಂದು ಎಸ್.ಆರ್.ಪಾಟೀಲ್ ಆಕ್ರೋಶ ವ್ಯಕ್ತ ಪಡಿಸಿದರು. ಕೂಡಲೇ ನಿಮ್ಮ ಹೇಳಿಕೆಗೆ ಕ್ಷಮೆ ಕೇಳಿ ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.
ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಾಗ, ಇದು ಏರಿದ ಧ್ವನಿಯಲ್ಲಿ ವಾಗ್ವಾದಕ್ಕೆ ಕಾರಣವಾಯಿತು. ಸಚಿವರ ಕ್ಷಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸಭಾಪತಿ ಅವರ ಮುಂದಿನ ಭಾವಿಗೆ ಇಳಿದು ಧರಣಿ ನಡೆಸಿದರು.
ಸಭಾಪತಿ ಅವರು ಸಚಿವರ ಹೇಳಿಕೆ ಅಸಮಾಧಾನ ವ್ಯಕ್ತಪಡಿಸಿ, ಈ ರೀತಿ ಮಾತನಾಡಿದ್ದು ಸರಿಯಲ್ಲ. ಮುಂದೆ ಈ ರೀತಿ ಹದ್ದು ಮೀರಿ ಮಾತನಾಡಬೇಡಿ ಎಂದು ಸಚಿವರಿಗೆ ಎಚ್ಚರಿಕೆ ನೀಡಿದರು.
ನಂತರ ಪ್ರತಿಪಕ್ಷದ ನಾಯಕರ ವಾದವನ್ನು ಆಲಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಪೊಲೀಸರ ವರ್ತನೆಯ ಕುರಿತು ಪ್ರತಿಪಕ್ಷದ ನಾಯಕರು ಮಂಡಿಸಿದ ವಾದ ನನಗೆ ಮನವರಿಕೆಯಾಗಿದೆ. ಹಾಗಾಗಿ ನಿನ್ನೆಯ ಘಟನೆಯನ್ನು ಹಕ್ಕುಚ್ಯುತಿ ವಿಚಾರಣೆಗೆ ಒಪ್ಪಿಸುವುದಾಗಿ ಹೇಳಿದರು.
ಜೆಡಿಎಸ್ನ ಸದಸ್ಯ ಮರಿತಿಬ್ಬೆಗೌಡ ಅವರು, ಪ್ರತಿಪಕ್ಷದ ಸದಸ್ಯರನ್ನು ತಡೆದು ನಿಲ್ಲಿಸಿರುವುದು ಅಕ್ಷಮ್ಯ, ಘಟನೆ ನಡೆದು 24 ಗಂಟೆಯಾಗಿದೆ. ಸರ್ಕಾರ ಕೂಡಲೇ ಸದರಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಿತ್ತು. ಈವರೆಗೂ ಕ್ರಮ ಜರುಗಿಸಿಲ್ಲ, ಇದರ ಹಿಂದೆ ಸರ್ಕಾರದ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.
ಸಭಾಪತಿ ಅವರು, ಸದಸ್ಯರ ಹಕ್ಕುಚ್ಯುತಿ ಇದೆ ಎಂದು ನನಗೆ ಮನವರಿಕೆಯಾಗಿದೆ. ಆ ಹಿನ್ನೆಲೆಯಲ್ಲಿ ಇದನ್ನು ಈಗಾಗಲೇ ಚಾಲ್ತಿಯಲ್ಲಿರುವ ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಿದ್ದೇನೆ. ಸದನ ನಡೆಯುವುದರ ಒಳಗೆ ಮೊದಲ ಸಭೆ ನಡೆಸಿ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಳ್ಳಿ ಎಂದು ಸಲಹೆ ನೀಡಿದರು.
ಈ ನಡುವೆ ಸದಸ್ಯ ಪಿ.ಆರ್.ರಮೇಶ್ ಅವರು ಕ್ರಿಯಾ ಲೋಪ ಪ್ರಸ್ತಾಪಿಸಿದಾಗ ಸಭಾಪತಿ ಅವರು ಅದನ್ನು ತಳ್ಳಿ ಹಾಕಿದರು.
ಬಿ.ಕೆ.ಹರಿಪ್ರಸಾದ್ ಅವರು, ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವಾಗಬೇಕು ಎಂದು ಒತ್ತಾಯಿಸಿದಾಗ, ಸಭಾನಾಯಕ ಕೋಟಾಶ್ರೀನಿವಾಸ ಪೂಜಾರಿ, ಎಂದಿನಂತೆ ಸಾಮಾನ್ಯ ವಾಹನದಲ್ಲಿ ಬರದೆ ಇದ್ದುದರಿಂದ ಪೊಲೀಸರು ತಡೆ ಹಿಡಿದು ನಿಲ್ಲಿಸಿದ್ದಾರೆ. ನಮ್ಮ ಗಮನಕ್ಕೆ ಬಂದ ತಕ್ಷಣ ಶಾಸಕರಿದ್ದ ಟ್ರ್ಯಾಕ್ಟರ್ ಗಳನ್ನು ಒಳಗೆ ಬಿಡಿಸಿದ್ದೇವೆ. ಇದು ಹಕ್ಕುಚ್ಯುತಿಗೆ ಒಳಪಡಲಿದೆಯೋ ಇಲ್ಲವೋ ಎಂಬ ಜಿಜ್ಞಾಸೆ ಕಾಡುತ್ತಿದೆ. ಅದೇನೆ ಇರಲಿ ಸಭಾಪತಿ ಅವರು ರೂಲಿಂಗ್ ನೀಡಿದ್ದಾರೆ. ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಿದ ಬಳಿಕ ಸರ್ಕಾರ ಮುಂದಿನ ಕ್ರಮ ಜರುಗಿಸಲಿದೆ ಎಂದು ಹೇಳಿದರು.