ಮಹಿಳಾ ಸಿಬ್ಬಂದಿ ಮೇಲೆ ಮಾನಭಂಗ ಯತ್ನ ನಡೆದಿದೆ ಎಂಬ ಸುಳ್ಳಾರೋಪ ಪೊಲೀಸರ ನೀಚತನದ ಪರಮಾವಧಿ: ಅಬ್ದುಲ್ ಮಜೀದ್

Prasthutha|

ಉಪ್ಪಿನಂಗಡಿ ಘಟನೆಯ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ

- Advertisement -

ಮಂಗಳೂರು: ಉಪ್ಪಿನಂಗಡಿಯಲ್ಲಿ ನಡೆದ ಕಾನೂನುಬಾಹಿರ ಲಾಠಿಚಾರ್ಜ್ ಪ್ರಮಾದವನ್ನು ಮರೆಮಾಚಲು ಪೊಲೀಸರು, ತಮ್ಮ ಮೇಲೆ ಹಲ್ಲೆ ನಡೆದಿದೆ, ಮಹಿಳಾ ಸಿಬ್ಬಂದಿಯ ಮೇಲೆ ಮಾನಭಂಗ ಯತ್ನ ನಡೆದಿದೆ ಎಂದು ಮಾಡಿರುವ ಆರೋಪ ನೀಚತನದ್ದಾಗಿದೆ. ಯಾವುದೇ ಮಹಿಳಾ ಸಿಬ್ಬಂದಿ ಮೇಲೆ ಇಂತಹ ಸುಳ್ಳು ಆರೋಪ ಮಾಡುವುದು ನೀಚತನದ ಪರಮಾವಧಿಯಾಗಿದೆ. ಆದ್ದರಿಂದ ಉಪ್ಪಿನಂಗಡಿ ಘಟನೆಯ ಬಗ್ಗೆ ಹಾಲಿ ನ್ಯಾಯಾಧೀಶರ ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಒತ್ತಾಯಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿಯಲ್ಲಿ ನಡೆದಿದ್ದ ತಲವಾರು ದಾಳಿ ಪ್ರಕರಣದ ಹೆಸರಿನಲ್ಲಿ ಸ್ಥಳೀಯ ಪಿಎಫ್ಐ ನಾಯಕರನ್ನು ಅಕ್ರಮವಾಗಿ ಬಂಧನದಲ್ಲಿಟ್ಟು, “ಕೆಲವು ಆರೋಪಿಗಳನ್ನು ನಮಗೆ ಕೊಡಬೇಕು ಇಲ್ಲದಿದ್ದರೆ ನಿಮ್ಮನ್ನು ಬಿಡುಗಡೆಗೊಳಿಸುವುದಿಲ್ಲ” ಎಂದು ಪೊಲೀಸರು ಬ್ಲ್ಯಾಕ್ ಮೇಲ್ ತಂತ್ರ ಪ್ರಯೋಗಿಸಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಪೊಲೀಸರ ಬಳಿ ಗುಪ್ತಚರ ವಿಭಾಗ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿರುವಾಗ ನಾಯಕರನ್ನು ಅಕ್ರಮ ಬಂಧನದಲ್ಲಿಟ್ಟು ಬ್ಲ್ಯಾಕ್ ಮೇಲ್ ಮಾಡುವ ಅಗತ್ಯವೇನಿತ್ತು. ರಾತ್ರಿ ಕರೆದುಕೊಂಡು ಹೋದ ನಾಯಕರನ್ನು ಮರು ದಿನ ಬಿಡುಗಡೆಗೊಳಿಸದಿದ್ದಾಗ ನಾಗರಿಕರು ಮತ್ತು ಕಾರ್ಯಕರ್ತರು ಬಹಳ ಶಿಸ್ತುಬದ್ಧವಾಗಿ ಪ್ರತಿಭಟನೆ ನಡೆಸಿದ್ದಾರೆ. ಸಂಜೆಯವರೆಗೂ ಪ್ರತಿಭಟನೆ ಶಾಂತಿಯುತವಾಗಿ ನಡೆದಿತ್ತು. ಸಂಜೆ ವೇಳೆಗೆ ಓರ್ವ ನಾಯಕರನ್ನು ಬಿಡುಗಡೆಗೊಳಿಸಿದಾಗ ಪ್ರತಿಭಟನಕಾರರೆಲ್ಲರೂ ಚದುರಿ ಹೋಗಿದ್ದರು. ಮತ್ತಿಬ್ಬರು ನಾಯಕರ ಬಿಡುಗಡೆ ಸಂಬಂಧ ಸಂಘಟನೆಯ ನಾಯಕರು ಡಿವೈಎಸ್ ಪಿ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದಾಗ ಬಂಟ್ವಾಳ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ದೂರದಲ್ಲಿ ನಿಂತಿದ್ದ ಪ್ರತಿಭಟನಕಾರರ ಬಳಿ ಹೋಗಿ ಅವರನ್ನು ಪ್ರಚೋದಿಸಿ, ನಮ್ಮಲ್ಲಿ ಲಾಠಿ ಇದೆ, ಪಿಸ್ತೂಲ್ ಇದೆ, ನಮ್ಮನ್ನು ಮುಟ್ಟಿ ನೋಡಿ ಎಂದು ಹೇಳುವ ಅಗತ್ಯ ಏನಿತ್ತು? ಇವೆಲ್ಲವೂ ಷಡ್ಯಂತರದ ಭಾಗವಾಗಿ ನಡೆದಿದೆ ಎಂದು ಆರೋಪಿಸಿದರು.

- Advertisement -

ಲಾಠಿ ಚಾರ್ಜ್ ನಡೆಸುವಾಗ ಸುಪ್ರೀಂಕೋರ್ಟ್ ನ ಆದೇಶ, ಪೊಲೀಸ್ ಮ್ಯಾನ್ಯುವೆಲ್ ನ ನಿಯಮಗಳನ್ನು ಪಾಲಿಸಿಲ್ಲ. ಗುಂಪು ನಿಯಂತ್ರಣಕ್ಕೆ ಬಾರದಿದ್ದಾಗ ಮತ್ತು ಗುಂಪು ಹಿಂಸೆಗೆ ಇಳಿದಾಗ ಮಾತ್ರ ಲಾಠಿ ಚಾರ್ಜ್ ಮಾಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಇಲ್ಲಿ ಇವೆಲ್ಲವನ್ನೂ ಗಾಳಿಗೆ ತೂರಿ ಕುಳಿತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಿ ಸುಮಾರು 40 ಜನರ ತಲೆ ಒಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅಬ್ದುಲ್ ಮಜೀದ್, ಇವರು ಪೊಲೀಸರೋ ಅಥವಾ ಹಿಟ್ಲರ್ ನ ಸೈನಿಕರೋ ಎಂದು ವಾಗ್ದಾಳಿ ನಡೆಸಿದರು.

ಪ್ರವಾದಿ ಕುಟುಂಬದ ಕೊಂಡಿಯಾದ ಆತೂರು ಅಸ್ಸಯ್ಯದ್ ಇಬ್ರಾಹೀಂ ಹಾದಿ ತಂಙಳ್ ಅವರ ತಲೆಗೆ ಉದ್ದೇಶಪೂರ್ವಕವಾಗಿ ಮಾರಕಾಯುಧದಿಂದ ಹಲ್ಲೆ ನಡೆಸಲಾಗಿದೆ. ಲಾಠಿಚಾರ್ಜ್ ನಡೆದ ಬಳಿಕ ಪೊಲೀಸರು ನಡೆದುಕೊಂಡ ರೀತಿ ನಾಚಿಕೆಗೇಡಿನದ್ದು. ನಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಲು ಪೊಲೀಸರು, ನಮ್ಮ ಮೇಲೆ ಪ್ರತಿಭಟನಕಾರರು ಹಲ್ಲೆ ನಡೆಸಿದರು, ಚಾಕು ಇರಿದರು, ವಾಮನ ಎಂಬ ಮಹಿಳಾ ಅಧಿಕಾರಿಯ ಮಾನಭಂಗಕ್ಕೆ ಯತ್ನಿಸಿದರು ಎಂಬ ನೀಚಮಟ್ಟದ ಆರೋಪ ಮಾಡಿದ್ದಾರೆ. ಪೊಲೀಸರು ಇಷ್ಟು ನೀಚಮಟ್ಟಕ್ಕೆ ಇಳಿಯಬಾರದು, ನಿಮ್ಮ ತಪ್ಪನ್ನು ಮರೆಮಾಚಲು ಓರ್ವ ಮಹಿಳಾ ಸಿಬ್ಬಂದಿಯ ಮೇಲೆ ಸುಳ್ಳು ಆರೋಪ ಮಾಡಿರುವುದು ನೀಚತನದ ಪರಮಾವಧಿ ಎಂದು ಹರಿಹಾಯ್ದರು.

 ಗೃಹ ಸಚಿವರು ನಿಜವಾಗಿಯೂ ಕಾನೂನುವನ್ನು ಒಪ್ಪುವಂತಹರಾಗಿದ್ದರೆ ಹಾಗೂ ಎಲ್ಲರಿಗೂ ನ್ಯಾಯ ಕೊಡುವವರಾಗಿದ್ದರೆ, ಈ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.

ಪೊಲೀಸ್ ಠಾಣೆಗೆ ಕಲ್ಲು ತೂರಿದ, ಹಲ್ಲೆ ನಡೆಸಿದ ಬಗ್ಗೆ ಒಂದೇ ಒಂದು ಸಿಸಿಟಿವಿ ದೃಶ್ಯಾವಳಿ ಪೊಲೀಸರ ಬಳಿ ಇದ್ದರೆ ಅದನ್ನು ತಕ್ಷಣ ಪತ್ರಿಕಾಗೋಷ್ಠಿ ಕರೆದು ಅವುಗಳನ್ನು ಬಿಡುಗಡೆ ಮಾಡಬೇಕು ಎಂದು ಸವಾಲು ಹಾಕಿದ ಅವರು, ಇಂತಹ ಕಟ್ಟು ಕಥೆಗಳನ್ನು ಸುಮಾರು 20 ವರ್ಷಗಳ ನಮ್ಮ ಚಳವಳಿಯ ಸಂದರ್ಭದಲ್ಲಿ ನೋಡಿದ್ದೇವೆ. ಸತ್ಯ ಮತ್ತು ನ್ಯಾಯಕ್ಕಾಗಿ ತ್ಯಾಗ ಬಲಿದಾನ ಮಾಡಲು ಸಿದ್ಧವಿರುವ ಚಳವಳಿಯಾಗಿದೆ. ಇದನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ರೀತಿಯ ಷಡ್ಯಂತ್ರವನ್ನು ಸಂವಿಧಾನಬದ್ಧ ಹಾಗೂ ಕಾನೂನುಬದ್ಧವಾಗಿ ಎದುರಿಸಲಾಗುವುದು. ಸಂತ್ರಸ್ತರಿಗೆ ನೈತಿಕ ಬೆಂಬಲದೊಂದಿಗೆ ಕಾನೂನು ಬೆಂಬಲವನ್ನೂ ನೀಡಲಾಗುವುದು ಎಂದು ಅಬ್ದುಲ್ ಮಜೀದ್ ತಿಳಿಸಿದರು.

Join Whatsapp