ಹೊಸದಿಲ್ಲಿ: ವಿಕಲಚೇತನರ ನ್ಯಾಯಾಂಗ ಸೇವೆಗಾಗಿ ಸುಪ್ರೀಂ ಕೋರ್ಟ್ ಹೊಸ ಸಮಿತಿಯೊಂದನ್ನು ರಚಿಸಿದೆ.
ವಿಕಲಚೇತನರಿಗೆ ನ್ಯಾಯಾಂಗ ಸೇವೆ ಸುಲಭವಾಗಿ ದೊರೆಯುವಂತೆ ಮಾಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ‘ಸುಪ್ರೀಂ ಕೋರ್ಟ್ ಕಮಿಟಿ ಆನ್ ಆ್ಯಕ್ಸೆಸಿಬಿಲಿಟಿ’ ಎಂಬ ಸಮಿತಿಯೊಂದನ್ನು ರಚಿಸಿದ್ದಾರೆ.
ಈ ಸಮಿತಿಗೆ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಮುಖ್ಯಸ್ಥರಾಗಿರಲಿದ್ದಾರೆ. ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯ ಅಧಿಕಾರಿಯೊಬ್ಬರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಯು) ಓರ್ವ ಪ್ರಾಧ್ಯಾಪಕ, ಸುಪ್ರೀಂ ಕೋರ್ಟ್ ಉದ್ಯೋಗಿಯಾಗಿರುವ ವಿಕಲಚೇತನ ವ್ಯಕ್ತಿ, ಸುಪ್ರೀಂ ಕೋರ್ಟ್‌ನ ವಕೀಲರ ಸಂಘ ನಾಮನಿರ್ದೇಶನ ಮಾಡುವ ವಕೀಲ (ವಿಕಲಚೇತನ) ಹಾಗೂ ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡುವ ವ್ಯಕ್ತಿಯೊಬ್ಬರು ಸಮಿತಿಯಲ್ಲಿ ಇರಲಿದ್ದಾರೆ.
ನ್ಯಾಯಾಲಯಕ್ಕೆ ಬರುವ ವಿಕಲಚೇತನರು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ಹೊಣೆಯನ್ನು ಈ ಸಮಿತಿಗೆ ವಹಿಸಲಾಗಿದೆ.