ಬಿಸಿಯೂಟ ನೌಕರರಿಗೆ ಇನ್ನೂ ಸಿಗದ ವೇತನ: CITU ಆಕ್ರೋಶ

Prasthutha|

ಬೆಂಗಳೂರು: ʻಕೋವಿಡ್‌ ಸಂಕಷ್ಟದ ದುಸ್ಥಿತಿಯಿಂದಾಗಿ ಸರಕಾರಗಳು ಹಲವು ವರ್ಗಗಳಿಗೆ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಿದೆ. ಆದರೆ, ಶೈಕ್ಷಣಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಷರ ದಾಸೋಹ ನೌಕರರಿಗೆ ಬರಬೇಕಾದ ನಿಗದಿತ ವೇತನವು ಕಳೆದ ಏಪ್ರಿಲ್‌ ಬಾಕಿ ಉಳಿಸಿಕೊಂಡಿದ್ದು ಇದರಿಂದ ಅಕ್ಷರ ದಾಸೋಹ ಕೆಲಸದಲ್ಲಿ ತೊಡಗಿಸಿಕೊಂಡಿರುವ ನೌಕರರ ಬದುಕು ದುಸ್ತರವಾಗಿದೆʼ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು)ದ ಗೌರವ ಅಧ್ಯಕ್ಷರಾದ ಎಸ್‌.ವರಲಕ್ಷ್ಮಿರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ನಗರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಸ್‌.ವರಲಕ್ಷ್ಮಿ ಅವರು ʻಕೇಂದ್ರ-ರಾಜ್ಯ ಸರಕಾರಗಳ ಸಂಯೋಜಿತ ಯೋಜನೆಯಾದ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಮಕ್ಕಳಿಗೆ ಬಿಸಿ ಬಿಸಿ ಊಟ ನೀಡುವ ಕೈಗಳ ಒಂದು ಹೊತ್ತಿಗೂ ಊಟ ಮಾಡಲು ಪರದಾಡುವ ಪರಿಸ್ಥಿತಿ ಬಂದಿದೆʼ ಎಂದರು.

- Advertisement -

ಬಿಸಿಯೂಟ ನೌಕರರಿಗೆ ಮಾಸಿಕವಾಗಿ ಬರುವುದೇ ರೂ. 2500 ಮಾತ್ರ ಆದರೆ ಅದನ್ನು ನಿಗದಿತವಾಗಿ ನೀಡುತ್ತಿಲ್ಲ. ಕೇಂದ್ರದಿಂದ ಹಣ ಬಿಡುಗಡೆ ಮಾಡಿದರೂ, ರಾಜ್ಯ ಸರಕಾರ ನೌಕರರಿಗೆ ಸಂಬಳ ನೀಡಲು ಮುಂದಾಗುತ್ತಿಲ್ಲ. ವರ್ಷಕ್ಕೆ 300 ದಿನಗಳ ಅವಧಿಯೆಂದು ಪರಿಗಣಿಸಿ ವೇತನ ನೀಡಬೇಕೆಂದು ನಿಗದಿಯಾಗಿದ್ದರೂ ಸಹ ವೇತನ ನೀಡದೆ ನೌಕರರ ಬದುಕಿನೊಂದಿಗೆ ಸರಕಾರ ಚೆಲ್ಲಾಟವಾಡುತ್ತಿದೆʼ ಎಂದು ಎಸ್‌.ವರಲಕ್ಷ್ಮಿ ಅವರು ಕಿಡಿಕಾರಿದ್ದಾರೆ.

ಸಂಘಟನೆಯ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಮಂಜುಳಾ ಕೆ.ಆರ್‌. ಅವರು ಮಾತನಾಡಿ ʻಶಾಲೆಗಳು ಪ್ರಾರಂಭವಾಗದಿದ್ದರೂ ಸಹ ನಾವು ಶಾಲೆಗಳಿಗೆ ಹೋಗಬೇಕಾಗಿದೆ. ಮಧ್ಯಾಹ್ನದ ವರೆಗೂ ಶಾಲೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಮಾಡಬೇಕಾಗಿದೆ. ಆದರೂ ನಮಗೆ ಸಂಬಳ ಬಿಡುಗಡೆ ಮಾಡಿಲ್ಲ. ಈಗಾಗಲೇ ಪಂಚಾಯತಿ ಮಟ್ಟದಲ್ಲಿ ಹೋರಾಟವನ್ನು ಮಾಡಿ ಸರಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಸಂಬಂಧಪಟ್ಟವರನ್ನು ಸಂಬಂಳದ ಬಗ್ಗೆ ವಿಚಾರಿಸಿದರೆ ಬರುತ್ತದೆ ಎಂಬ ಸಬೂಬು ಹೇಳುತ್ತಾರೆ. ಮೇಲಾಧಿಕಾರಿಗಳನ್ನು ವಿಚಾರಿಸಿದರೆ ಸರಿಯಾದ ಉತ್ತರ ನೀಡುತ್ತಿಲ್ಲ. ಈಗ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆʼ ಎಂದರು.

ಅಲ್ಲದೆ, ನಮಗೆ ನರೇಗಾ ಕೆಲಸದಲ್ಲಿಯೂ ತೊಡಗಿಸಿಕೊಳ್ಳಲು ಬಿಡುತ್ತಿಲ್ಲ. ನೂರಾರು ಕಾರಣಗಳನ್ನು ತಿಳಿಸುತ್ತಿದ್ದಾರೆ. ಅಕ್ಷರ ದಾಸೋಹ ನೌಕರರಿಗೆ ನೀಡುವುದೇ ರೂ.2500 ಮಾತ್ರ. ಇಷ್ಟು ಕಡಿಮೆ ಸಂಬಂಳದಲ್ಲಿ ಜೀವನ ನಡೆಸುವುದೇ ಹೇಗೆ. ಸರಕಾರ ನೌಕರರಿಗೆ ಬದುಕು ಉತ್ತಮಪಡಿಸಲು ಮುಂದಾಗುತ್ತಿಲ್ಲʼ ಎಂದು ಹೇಳಿದರು.

ಕರ್ನಾಟಕ ರಾಜ್ಯ ಅಕ್ಷ ದಾಸೋಹ ನೌಕರರ ಸಂಘ(ಸಿಐಟಿಯು)ದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಅವರು ಮಾತನಾಡಿ ʻಐಎಲ್‌ಓ ಮತ್ತು ಭಾರತೀಯ ಸಂವಿಧಾನವು ʻʻಒಂದು ಪ್ರಭುತ್ವ ಪ್ರತಿ ನಾಗರಿಕ ಘನತೆಯ ಬದುಕನ್ನು ಎತ್ತಿ ಹಿಡಿಯಬೇಕು ಎಂಬ ನಿರ್ದೇಶನ ನೀಡಿದೆ. ಆದರೆ ಬಿಸಿಯೂಟ ಮಹಿಳೆಯರು ಈ ಬದುಕಿನಿಂದ ವಂಚಿತರಾಗಿದ್ದಾರೆ. ಈ ಯೋಜನೆ ಕೇಂದ್ರ ಸರಕಾರದ್ದಾದರೂ ಸಹ ಅವರು ಕೇವಲ 600 ರೂ.ಗಳೂ ಹಣ ನೀಡಿ ಕಳೆದ 18 ವರ್ಷಗಳಿಂದ ದುಡಿಸಿಕೊಳ್ಳುತ್ತದೆʼ ಎಂದರು.

ಅಲ್ಲದೆ, ಬೇರೆ ಬೇರೆ ರಾಜ್ಯಗಳು ಮತ್ತು ನಮ್ಮ ರಾಜ್ಯದ ಉಚ್ಛನ್ಯಾಯಾಲಯವು ಸಹ ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ ಖಾತ್ರಿಪಡಿಸಬೇಕೆಂದೂ ಹೇಳಿದೆ. ಹಾಗೆಯೇ (ನಂ.ಅ.ಇ.143 ವೆಚ್ಚ-8/2020 ದಿನಾಂಕ: 09.04.2020ರಲ್ಲಿ) ಶಿಕ್ಷಣ ಇಲಾಖೆ ನೌಕರರಿಗೆ 6000 ಮತ್ತು ಸಹಾಯಕಿಯರಿಗೆ 5000 ರೂ.ಗಳನ್ನು ಕೊಡಬೇಕೆಂದು ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸನ್ನು ಮುಖ್ಯಮಂತ್ರಿಗಳು ಅನುಮೋದನೆ ನೀಡದೆ ಬಾಕಿ ಉಳಿಸಿಕೊಂಡಿರುವ ಪರಿಣಾಮವಾಗಿ ವೇತನ ಹೆಚ್ಚಳವಾಗದೇ ನೌಕರರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಸಂಘಟನೆಯು ತಿಳಿಸಿದೆ.

ಕೇಂದ್ರ ಸರಕಾರ 2010 ರಿಂದ ಹಾಗೂ ರಾಜ್ಯ ಸರಕಾರ 2018ರಿಂದ ವೇತನ ಹೆಚ್ಚಳ ಮಾಡಲು ಮುತುವರ್ಜಿ ವಹಿಸದೆ ಇರುವುದರಿಂದ ಅತ್ಯಂತ ಕಡಿಮೆ ವೇತನದಲ್ಲಿ ನೌಕರರು ಬದುಕುವಂತಾಗಿದೆ. ಕೇಂದ್ರ ಸರಕಾರ ಮಕ್ಕಳ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಫಲಾನುಭವಿ ಮಕ್ಕಳಿಗೆ ಮೇ-ಜೂನ್‌ ತಿಂಗಳ ಆಹಾರ ಧ್ಯಾನದ ಬದಲಿಗೆ ಹಣವನ್ನು ನೇರ ನಗದು ವರ್ಗಾವಣೆ ಕ್ರಮವೂ ಖಂಡನೀಯವಾದದ್ದು ಎಂದು ತಿಳಿಸಿದರು.

ನೌಕರರ ಹೋರಾಟದ ಪರಿಣಾಮವಾಗಿ ಈಗಾಗಲೇ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಹಲವು ಸಭೆಗಳು ನಡೆದಿವೆ. ಮಾರ್ಚ್‌ 3ರಂದು ರಾಜ್ಯವ್ಯಾಪಿ ನಡೆದ ಹೋರಾಟದ ಪರಿಣಾಮವಾಗಿ 15.03.2021ರಂದು ಇಲಾಖೆಯ ಆಯುಕ್ತರು ಸಭೆ ನಡೆಸಿ 17 ಬೇಡಿಕೆಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಯಾವುದೇ ಪ್ರಗತಿಯ ಹಂತಕ್ಕೆ ಮುಂದಾಗುವುದಿಲ್ಲ. ಅಕ್ಷರ ದಾಸೋಹ ನೌಕರರ ಬೇಡಿಕೆಗಳ ಬಗ್ಗೆ ಸರಕಾರ ಕ್ರಮವಹಿಸದೆ ಇದ್ದಲ್ಲಿ  ಮುಂಬರುವ ದಿನಗಳಲ್ಲಿ ಹೋರಾಟವನ್ನು ನಡೆಸಬೇಕಾಗಬಹುದು ಎಂದು ಸಂಘಟನೆಯು ಎಚ್ಚರಿಕೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಎಸ್‌.ವರಲಕ್ಷ್ಮಿ, ಮಾಲಿನಿ ಮೇಸ್ತ, ಮಂಜುಳಾ ಕೆ.ಆರ್‌. ಸೇರಿದಂತೆ ಉಪಾಧ್ಯಕ್ಷರಾದ ಶಿಲ್ಪಾ ಬಿ.ಎಂ. ಮತ್ತು ರಾಜಮ್ಮ ಅವರು ಉಪಸ್ಥಿತರಿದ್ದರು.  

ಸಂಘದ ಪ್ರಮುಖ ಬೇಡಿಕೆಗಳು

1.      ಪ್ರತಿ ಬಿಸಿಯೂಟ ನೌಕರರಿಗೆ ಹಾಗೂ ಅವರ ಕುಟುಂಬಗಳಿಗೆ ಲಸಿಕೆ ನೀಡಿ ಜೀವ ಉಳಿಸಬೇಕು.

2.      ಕೊರೊನಾದಿಂದ ಮರಣ ಹೊಂದಿದ ಬಿಸಿಯೂಟ ನೌಕರರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು.

3.      2021-22ರ ಬಜೆಟ್ಟಿನಲ್ಲಿ ಕಡಿತವಾಗಿರುವ 1400 ಕೋಟಿ ಅನುದಾನ ವಾಪಸ್ಸು ಕೊಡಬೇಕು ಮತ್ತು ಬಜೆಟ್ಟಿನಲ್ಲಿ ಅನುದಾನ ಹೆಚ್ಚಿಸಬೇಕು.

4.      ನೂತನ ಶಿಕ್ಷಣ ನೀತಿ 2020ನ್ನು ಜಾರಿ ಮಾಡುವಾಗ ಬಿಸಿಯೂಟ ಯೋಜನೆಯನ್ನು ಬಲಿಷ್ಠಪಡಿಸಿ ಈಗಿರುವ ಮಾದರಿಯನ್ನು ಮುಂದುವರೆಸಬೇಕು.

5.      ಬಿಸಿಯೂಟ ನೌಕರರನ್ನು ಖಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು.

6.      ಬಿಸಿಯೂಟ ನೌಕರರಿಗೆ ಎಲ್‌.ಐ.ಸಿ. ಆಧಾರಿತ ಪೆನ್ಷನ್‌ ನಿಗದಿ ಮಾಡಬೇಕು ಮತ್ತು ಈ ಪೆನ್ಷನ್‌ ನಿಗದಿಯಾಗುವವರೆಗೂ ಕೂಡಲೇ ಬಿಡುಗಡೆ ಮಾಡಬೇಕಾದ ನೌಕಕರಿಗೆ ರೂ.1 ಲಕ್ಷ 50 ಸಾವಿರ ಇಡಿಗಂಟು ನೀಡಿ ಬಿಡುಗಡೆ ಮಾಡಬೇಕು.

7.      60 ವರ್ಷ ವಯಸ್ಸಿನ ನೆಪವೊಡ್ಡಿ ಅಡುಗೆ ನೌಕರರನ್ನು ಕೆಲಸದಿಂದ ತೆಗೆಯಬಾರದು.

8.      ಶಾಲಾ ಅವಧಿಯ ನಂತರ ನರೇಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸ ನೀಡಿ ನರೇಗಾ ಯೋಜನೆಯಿಂದ ವೇತನ ನೀಡುವಂತಾಗಬೇಕು.

9.      ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿ ಬೇಡ, ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು.

10. ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗೆ ಅಕ್ಷರದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು.

11. ಶಾಲೆಗಳಲ್ಲಿ ಗ್ರೂಪ್‌ ʻʻಡಿʼʼ ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಛತೆ, ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಆದೇಶ ನೀಡಬೇಕು.

12. ಕರೊನಾ ಸಂದರ್ಭದ 2021 ಏಪ್ರಿಲ್‌ ನಿಂದ ಜುಲೈ ವರೆಗಿನ ವೇತನ ಕೂಡಲೇ ಬಿಡುಗಡೆ ಮಾಡಬೇಕು.

13. ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿಯಾಗಬೇಕು.

14. ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು.

15. ಪ್ರತಿಶಾಲೆಯಲ್ಲಿ ಕನಿಷ್ಟ 2 ಜನ ಅಡುಗೆಯವರು ಇರಲೇಬೇಕು.

16. ಕೋವಿಡ್‌-19ರ ಭಾಗವಾಗಿ ಕ್ವಾರಂಟೈನ್‌ನಲ್ಲಿದ್ದವರಿಗೆ ಅಡುಗೆ ಮಾಡಿ ಬಡಿಸಿದ ನೌಕರರಿಗೆ ವೇತನ ಪಾವತಿಯಾಗಬೇಕು.

17. ಐಎಲ್‌ಸಿ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು.

18. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೆಲಸದ ದಿನಗಳನ್ನು ವಾರ್ಷಿಕ 200 ದಿನಗಳಿಗೆ ವಿಸ್ತರಿಸಿ ಕನಿಷ್ಟ ಕೂಲಿ 600 ರೂ. ಹೆಚ್ಚಿನ ಎಲ್ಲರಿಗೂ ನರೇಗಾ ಕೆಲಸ ಕೊಡಿ.

19. ಮಕ್ಕಳಿಗೆ ನೀಡುವ ಆಹಾರ ಧಾನ್ಯವನ್ನು ಪ್ರತಿ ತಿಂಗಳು ಶಾಲೆ ಪ್ರಾರಂಭವಾಗುವವರೆಗೂ ವಿತರಿಸಬೇಕು.

20. 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿರುವುದನ್ನು ವಾಪಸ್ಸು ಪಡೆದು ಕಾರ್ಮಿಕ ಪರ ಕಾನೂನುಗಳನ್ನು ಜಾರಿ ಮಾಡಬೇಕು.

- Advertisement -