ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿ ಗೋಪಾಲಪುರ ಸಂತ ಅಂತೋಣಿ ಚರ್ಚ್ ನಲ್ಲಿ ಶ್ರದ್ಧಾ ಭಕ್ತಿಯಿಂದ ಕ್ರಿಸ್ಮಸ್ ಆಚರಿಸಲಾಯಿತು.
ಗೋಪಾಲಪುರದ ಸಂತ ಅಂತೋಣಿ ಚರ್ಚ್ ನಲ್ಲಿ ರಾತ್ರಿ 11 ಗಂಟೆಗೆ ಕ್ರಿಸ್ಮಸ್ ಹಾಡುಗಳನ್ನು ಹಾಡುತ್ತಾ ರಾತ್ರಿ ಸುಮಾರು 11.30ಕ್ಕೆ ಬಲಿಪೂಜೆಯನ್ನು ಫಾದರ್ ಜಾಕಬ್ ಕೊಳನೂರು ಪ್ರಾರಂಭ ಮಾಡಿದರು. ಇದೇ ಸಂದರ್ಭದಲ್ಲಿ ಬಾಲಯೇಸುವಿನ ಪ್ರತಿಮೆಯನ್ನು ಗೋದಲಿಯಲ್ಲಿ ಇಟ್ಟು ಆರಾಧಿಸಲಾಯಿತು.
ದೇವರ ಸಂದೇಶ ಸಾರುತ್ತಾ ಯೇಸು ಕ್ರಿಸ್ತರ ಜನನವು ದೇಶ ಮತ್ತು ರಾಜ್ಯದಲ್ಲಿ ಶಾಂತಿಯುಂಟಾಗಲಿ ಹಾಗೂ ಕೊರೋನಾ ಮತ್ತು ಇತರ ಕಾಯಿಲೆಗಳಿಂದ ದೇಶ ಮತ್ತು ರಾಜ್ಯ ಎಲ್ಲಾ ತರದ ಕಾಯಿಲೆಗಳಿಂದ ದೂರ ಸರಿದು ಎಲ್ಲರಿಗೂ ಒಳ್ಳೆಯದು ಕಾಣಲಿ ಎಂದು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಸಂತ ಅಂತೋನಿ ಚರ್ಚ್ ನಲ್ಲಿ ನೆರೆದಿದ್ದ ಭಕ್ತರಿಗೆ ಕೇಕ್ ವಿತರಿಸಲಾಯಿತು.