ಮಂಗಳೂರು : ಕ್ರೈಸ್ತ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಯಡಿಯೂರಪ್ಪ ನಿರಾಕರಿಸಿರುವ ಬಗ್ಗೆ ಕಾಂಗ್ರೆಸ್ ನಾಯಕ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಐವನ್ ಡಿಸೋಜ, ತಕ್ಷಣವೇ ಕ್ರೈಸ್ತ ಅಭಿವೃದ್ಧಿ ನಿಗಮ ರಚಿಸುವಂತೆ ಒತ್ತಾಯಿಸಿದ್ದಾರೆ.
ಕ್ರೈಸ್ತ ಸಮುದಾಯಕ್ಕೆ ಹೋಲಿಸಿದರೆ, ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಮರಾಠ, ವೀರಶೈವರಂತಹ ಸಮುದಾಯಗಳಿಗೆ ಸರಕಾರ ಅಭಿವೃದ್ಧಿ ನಿಗಮ ರಚಿಸುವುದಾದರೆ, ಕ್ರೈಸ್ತರಿಗೂ ಸಿಎಂ ಅವರನ್ನು ಕೇಳುವ ಹಕ್ಕಿದೆ. ಕ್ರೈಸ್ತ ಅಭಿವೃದ್ಧಿ ನಿಗಮದ ಪ್ರಸ್ತಾಪವನ್ನು ನಿರಾಕರಿಸುವುದಕ್ಕೆ ಕಾರಣವೇನು ಎಂಬುದನ್ನು ಅವರು ತಿಳಿಸಬೇಕು. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕ್ರೈಸ್ತ ಸಮುದಾಯ ಇದೆ. ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ಕ್ರೈಸ್ತ ಸಮುದಾಯದ ಕೊಡುಗೆ ಸಾಕಷ್ಟಿದೆ ಎಂದು ಡಿಸೋಜ ಹೇಳಿದ್ದಾರೆ.
ಕ್ರೈಸ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಇಂತಹ ನಿರ್ಧಾರ ಕೈಗೊಳ್ಳಲು ಸಿಎಂಗೆ ಸಲಹೆ ಕೊಟ್ಟವರು ಯಾರು? ಕ್ರೈಸ್ತರು ರಾಜ್ಯದಲ್ಲಿ ಘನತೆಯಿಲ್ಲದವರು ಎಂದು ಸಿಎಂ ತಿಳಿದಿದ್ದಾರೆಯೇ? ಕ್ರೈಸ್ತರು ಮಂಗಗಳೆಂದು ಅವರು ತಿಳಿದಿದ್ದಾರೆಯೇ? ಹೀಗಾಗಿ ಅವರು ಕ್ರೈಸ್ತ ಅಭಿವೃದ್ಧಿ ನಿರಾಕರಿಸುತ್ತಿದ್ದಾರೆಯೇ? ಎಂದು ಡಿಸೋಜಾ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಎ.ಸಿ. ವಿನಯ್ ರಾಜ್, ಜೇಮ್ಸ್ ಪ್ರವೀಣ್, ಸ್ಟೇನಿ ಅಲ್ವಾರಿಸ್, ಲ್ಯಾನ್ಸೆಲೊಟ್ ಪಿಂಟೊ, ಅಲ್ಸ್ ಟನ್ ಡಿಕುನ್ಹಾ, ಆಶಿತ್ ಪಿರೇರಾ, ಲಾರೆನ್ಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಕ್ರೈಸ್ತ ಅಭಿವೃದ್ಧಿ ನಿಗಮದ ನಿರಾಕರಣೆಯ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಕ್ರೈಸ್ತರು ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.