ರಾಯ್ ಪುರ: ರಾಯ್ ಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಛತ್ತೀಸ್ ಗಢ ಸರ್ಕಾರದ ಒಡೆತನದ ಹೆಲಿಕಾಪ್ಟರ್ ಪತನಗೊಂಡಿದ್ದು, ಇಬ್ಬರೂ ಪೈಲಟ್ ಗಳು ಸಾವನ್ನಪ್ಪಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಮೃತರನ್ನು ಕ್ಯಾಪ್ಟನ್ ಗೋಪಾಲ್ ಕೃಷ್ಣ ಪಾಂಡಾ ಮತ್ತು ಕ್ಯಾಪ್ಟನ್ ಎಪಿ ಶ್ರೀವಾಸ್ತವ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಪಘಾತದ ಕಾರಣ ತಕ್ಷಣವೇ ತಿಳಿದುಬಂದಿಲ್ಲ.
ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ, ಘಟನೆಯು ರಾತ್ರಿ 9.10 ರ ಸುಮಾರಿಗೆ ಸಂಭವಿಸಿದ್ದು, ಆಗಸ್ಟಾ ಹೆಲಿಕಾಪ್ಟರ್ ವಾಡಿಕೆಯ ತರಬೇತಿಯಲ್ಲಿದ್ದಾಗ ವಿಮಾನ ನಿಲ್ದಾಣದ ರನ್ ವೇಯ ಕೊನೆಯಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಪೈಲಟ್ ಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ.