ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಪಿಸ್ತೂಲ್ ಪ್ರದರ್ಶಿಸುವ ಆಘಾತಕಾರಿ ವಿಡಿಯೋ ವೈರಲ್!

Prasthutha|

ಚಿತ್ತಾಪುರ: ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಪಿಸ್ತೂಲ್ ಪ್ರದರ್ಶಿಸುತ್ತಿರುವ ಆಘಾತಕಾರಿ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

- Advertisement -

ಕುರ್ಚಿಯಲ್ಲಿ ಕುಳಿತು ಮಣಿಕಂಠ ರಾಠೋಡ ತಮ್ಮ ಬಲಗೈ ತೋರುಬೆರಳಿನಿಂದ ಪಿಸ್ತೂಲ್ ತಿರುಗಿಸುತ್ತಿರುವುದು ವೈರಲಾದ ವಿಡಿಯೊದಲ್ಲಿ ಸೆರೆಯಾಗಿದೆ.

ಶುಕ್ರವಾರ ಚಿತ್ತಾಪುರಕ್ಕೆ ಚುನಾವಣಾ ಪ್ರಚಾರಕ್ಕೆಂದು ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಕಾಂಗ್ರೆಸ್ ಪಕ್ಷದ ನಾಯಕರ ಮೇಲೂ ಪ್ರಕರಣಗಳಿವೆ. ಮಣಿಕಂಠ ಕೂಡ ಜಾಮೀನು ಪಡೆದಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠನನ್ನು ಸಮರ್ಥಿಸಿಕೊಂಡಿದ್ದರು. ಅದೇ ದಿನವೇ ಮಣಿಕಂಠ ಪಿಸ್ತೂಲ್ ತಿರುಗಿಸುವ ವಿಡಿಯೋ ವೈರಲ್ ಆಗಿದ್ದು, ಬಿಜೆಪಿಗೆ ಮುಜುಗರ ತಂದಿದೆ.

- Advertisement -

ರೌಡಿ ಶೀಟರ್ ಮಣಿಕಂಠ ರಾಥೋಡ್ ಮೇಲೆ 40 ಪೊಲೀಸ್‌ ಕೇಸ್!

ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ 40 ಪ್ರಕರಣಗಳಿದ್ದು, ಕಲಬುರಗಿ, ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯ ಮತ್ತು ನೆರೆಯ ತೆಲಂಗಾಣದ ಅನೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ಇವೆ.

ಬಹುತೇಕ ಪ್ರಕರಣಗಳು ಅಕ್ಕಿ, ಹಾಲಿನ ಪುಡಿ ಅಕ್ರಮ ಸಾಗಾಟದ ಪ್ರಕರಣಗಳಾಗಿದ್ದು ಜೊತೆಗೆ ಜೀವ ಬೆದರಿಕೆ ನೀಡಿದ ಪ್ರಕರಣಗಳು ಕೂಡ ಇವೆ. ಯಾದಗಿರಿ ಜಿಲ್ಲಾ ಕೋರ್ಟ್​ನಿಂದ ಎರಡು ವರ್ಷ ಶಿಕ್ಷೆ ಕೂಡ ವಿಧಿಸಲಾಗಿದ್ದು, ಅದಕ್ಕೆ ತಡೆಯಾಜ್ಞೆಯನ್ನು ಕೂಡ ಮಣಿಕಂಠ ರಾಥೋಡ್ ಪಡೆದಿದ್ದಾರೆ.

ಕಲಬುರಗಿ, ಹೈದ್ರಾಬಾದ್, ಯಾದಗಿರಿ ಸೇರಿದಂತೆ ಹಲವೆಡೆ ಮಣಿಕಂಠ ಹೊಂದಿರುವ ಒಟ್ಟು ಸ್ಥಿರಾಸ್ತಿ ಮೌಲ್ಯ 17.83 ಕೋಟಿ ರೂಪಾಯಿಯಾದರೆ, ಇವರ ಪತ್ನಿ ಹೆಸರಲ್ಲಿ 13.48 ಕೋಟಿ ರೂ. ಒಟ್ಟು ಮೌಲ್ಯಸ್ಥಿರಾಸ್ತಿ ಇದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರವು ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣ, ಚಿತ್ತಾಪುರ ಎಸ್ಸಿ ಮೀಸಲು ಕ್ಷೇತ್ರ, ಹಾಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುತ್ತಿರುವ ಕ್ಷೇತ್ರ.

ಈಗಾಗಲೇ ಎರಡು ಬಾರಿ ಗೆದ್ದಿರುವ ಪ್ರಿಯಾಂಕ್ ಖರ್ಗೆ, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.



Join Whatsapp