ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿ ಶ್ರೀ ಆದಿಶಕ್ತಿ ಕೋಳಾಲಮ್ಮ ದೇವಿ ಟ್ರಸ್ಟ್ನ ಧರ್ಮದರ್ಶಿ ಅಮ್ಮ ಮತ್ತು ಅರ್ಚಕ ಲಕ್ಷ್ಮೀಪತಿ ಇಬ್ಬರೂ ಒಂದೇ ದಿನ ಮೃತಪಟ್ಟಿದ್ದ ಪ್ರಕರಣವು ಮತ್ತೊಂದು ಮತ್ತೊಂದು ತಿರುವು ಪಡೆದಿದೆ.
ಭಕ್ತರ ಪಾಲಿನ ದೇವಿಯಂತಿದ್ದ ಶ್ರೀಧರಮ್ಮ ಮತ್ತು ಆರ್ಚಕರ ಸಾವು ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದ ಪ್ರಕರಣವಾಗಿದೆ. ಈ ಜೋಡಿ ಆತ್ಮಹತ್ಯೆಗಳ ಸುತ್ತ ಹಲವು ಅನುಮಾನ, ಗೊಂದಲ ಸೃಷ್ಟಿಸಿತ್ತು. ಬಳಿಕ ದೇವಾಲದ ಆವರಣದಲ್ಲಿ ಸಿಕ್ಕಿದ್ದ ಡೆತ್ನೋಟ್ ಮತ್ತು ಸಾವಿಗೂ ಮೊದಲು ಅವರಿಬ್ಬರು ಮಾಡಿದ್ದ ವಿಡಿಯೋ ಸಿಕ್ಕಿತ್ತು. ಅವುಗಳು ಗೊಂದಲವನ್ನು ತಕ್ಕ ಮಟ್ಟಿಗೆ ಕರಗಿಸಿದೆಯಾದರೂ ‘ಅನಿಲ್’ ಎಂಬಾತನ ಹೆಸರೂ ಕೇಳಿಬಂದಿತ್ತು.
ಶ್ರೀಧರಮ್ಮ 12ನೇ ವಯಸ್ಸಿಗೆ ದೇವರ ಆರಾಧಕರಾಗಿದ್ದ ಶ್ರೀಧರಮ್ಮ, ದೇವರ ಕಾರ್ಯಗಳಿಂದ ಅಸಂಖ್ಯಾತ ಭಕ್ತವೃಂದ ಹಾಗೂ ಶಿಷ್ಯವೃಂದ ಗಳಸಿ ಖ್ಯಾತರಾಗಿದ್ದರು. ಪುರುಷರಾಗಿದ್ದ ಶ್ರೀಧರ್ ಮಂಗಳಮುಖಿಯಾಗಿ ಪರಿವರ್ತನೆಯಾಗಿ ಮುಂದೆ ಶ್ರೀಧರಮ್ಮ ಎಂದೇ ಪರಿಚಿತರಾಗಿದ್ದಾರೆ.
ಭಕ್ತರ ಇಷ್ಟಾರ್ಥಗಳನ್ನ ಈಡೇರಿಸೋ ದೇವಿ, ಅಸಂಖ್ಯಾತ ಭಕ್ತರ ಪಾಲಿಗೆ ಅಮ್ಮಾ ಕೂಡ ಆಗಿದ್ದರು ಶ್ರೀಧರಮ್ಮ. ನಿತ್ಯ ಭಕ್ತ ಸಮೂಹವನ್ನ ಸೆಳೆಯುತ್ತಿದ್ದ ಅವರು ಗುಟ್ಟಹಳ್ಳಿ ಬಳಿ ಶ್ರೀ ಆದಿಶಕ್ತಿ ಕೋಳಾಲಮ್ಮದೇವಿ, ಶ್ರೀ ಮುನೇಶ್ವರಸ್ವಾಮಿ ದೇವಾಲಯ ಹೆಸರಲ್ಲಿ ಟ್ರಸ್ಟ್ ಮಾಡಿಕೊಂಡಿದ್ದರು. ಇವರ ಜತೆ ಶಿಷ್ಯ ಲಕ್ಷ್ಮೀಪತಿ ಕೂಡ ಇದ್ದರು.
ಆದರೆ ನ.11ರ ರಾತ್ರಿ ಭಕ್ತರ ಪಾಲಿಗೆ ಸಿಡಿಲೆರಗಿದಂತೆ ಆಯಿತು. ಇಬ್ಬರೂ ಕಾಣೆಯಾಗಿದ್ದರು. ಮರುದಿನ ಬೆಳಿಗ್ಗೆ ವಿಷಯ ತಿಳಿದಾಗ ಭಕ್ತರು ಭೂಮಿಗಿಳಿದು ಹೋದರು. ಶ್ರೀಧರಮ್ಮ ಮತ್ತು ಲಕ್ಷ್ಮೀಪತಿ ಶವಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಆಲಯದಲ್ಲಿ ಡೆತ್ನೋಟ್ ಸಿಕ್ಕುತ್ತದೆ. ಮಾತ್ರವಲ್ಲ, ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮಾಡಿದರೆನ್ನಲಾದ 2 ವಿಡಿಯೋ ಕೂಡ ವೈರಲ್ ಆಗುತ್ತದೆ. “ಜೀವನದಲ್ಲಿ ತುಂಬಾ ಜುಗುಪ್ಸೆಯಾಗುತ್ತಿದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಕಾಲಿನ ಕಾಲುಂಗುರವನ್ನು ತೆಗೆಯಬೇಡಿ. ನನಗೆ ಚೆನ್ನಾಗಿ ಅಂತ್ಯಸಂಸ್ಕಾರ ಮಾಡಿ’ ಎಂದು ಶ್ರೀಧರಮ್ಮ ವೀಡಿಯೋದಲ್ಲಿ ಹೇಳಿದ್ದರು.
ಮತ್ತೊಂದು ವಿಡಿಯೋದಲ್ಲಿ ‘ಮಾತೃ ಸ್ವರೂಪಿಣಿ ಅಮ್ಮನವರನ್ನು ಬಿಟ್ಟು ಇರಲು ಆಗುತ್ತಿಲ್ಲ. ಅವರ ಜತೆ ನಾನೂ ಹೋಗುತ್ತಿದ್ದೇನೆ. ಅಪ್ಪ ನನ್ನನ್ನು ಕ್ಷಮಿಸಿರಿ..ಮನೆಯಲ್ಲಿರುವವರನ್ನು ಚೆನ್ನಾಗಿ ನೋಡಿಕೊಳ್ಳಿ. ನನ್ನ ಅಜ್ಜಿ ಬಳಿಗೆ ಹೋಗುತ್ತಿದ್ದೇನೆ’ ಎಂದು ಅರ್ಚಕ ಲಕ್ಷ್ಮೀಪತಿ ಹೇಳಿದ್ದರು.
ಇಷ್ಟೆಲ್ಲಾ ಆದ ಬಳಿಕ ಅನಿಲ್ ಎಂಬಾತನ ಹೆಸರು ಕೇಳಿಬಂದಿತ್ತು. ಅಮ್ಮನ ಭಕ್ತನಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಸಮೀಪದ ಕಣ್ಣೂರಿನ ಅನಿಲ್ ಎಂಬಾತ ಕೊಳಲಮ್ಮ ದೇವಾಲಯದ ಅಭಿವೃದ್ಧಿಗೆ ಕೈ ಜೋಡಿಸಿದ್ದರು. ಹಲವು ತಿಂಗಳಿಂದ ಧಾರ್ಮಿಕ ಮತ್ತು ಸೇವಾ ಚಟುವಟಿಕೆಯಲ್ಲಿ ಅವರೇ ಉಸ್ತುವಾರಿ ವಹಿಸಿದ್ದರು. ಅದೇ ಅನಿಲ್ಗೆ ಮನೆಯಲ್ಲಿ ಮದುವೆ ಮಾತುಕತೆ ನಡೆದಾಗ ಅಮ್ಮ ಮದುವೆಗೆ ಒಪ್ಪಿಕೊಳ್ಳದಂತೆ ಸಲಹೆ ನೀಡಿದ್ದರು. ಆದರೆ ಅನಿಲ್ ಅನ್ಮನ ಆ ಸಲಹೆ ನಿರಾಕರಿಸಿ ಹುಡುಗಿ ನೋಡಲು ಹೋಗುತ್ತಾರೆ. ಬಳಿಕ ಅನಿಲ್ ಮತ್ತೆ ದೇವಾಲಯದ ಕಡೆಗೆ ಗಮನಹರಿಸುವುದಿಲ್ಲ.
ಮದುವೆ ಸಿದ್ಧತೆಯಲ್ಲಿ ತೊಡಗಿದ್ದ ಅನಿಲ್ ದೇವಾಲಯದಿಂದ ಅಂತರ ಕಾಪಾಡಿಕೊಳ್ಳುತ್ತಾರೆ. ಮೊಬೈಲ್ ಅನ್ನು ಸ್ವಿಚ್ಅಫ್ ಮಾಡಿ ಅಮ್ಮನವರ ಪ್ರತಿಕ್ರಿಯೆಗೆ ಸಿಗುತ್ತಿರಲಿಲ್ಲ. ಅನಿಲ್ ಮದುವೆಯಾದರೆ ದೇವಾಲಯದ ಅಭಿವೃದ್ಧಿಯಾಗುವುದಿಲ್ಲ ಮಾತ್ರವಲ್ಲ, ಅನಿಲ್ ಶಾಸ್ವತ ದೂರವಾಗುತ್ತಾನೆಂದು ಅಮ್ಮ ಕೊರಗುತ್ತಾರೆ. ಕೊನೆಗೆ ಅಮ್ಮ ಆತ್ಮಹತ್ಯೆ ನಿರ್ಧರಿಸುತ್ತಾರೆ. ಅರ್ಚಕ ಲಕ್ಷ್ಮೀಪತಿಯಲ್ಲಿ ವಿಷಯ ತಿಳಿಸುತ್ತಾರೆ. ಲಕ್ಷ್ಮೀಪತಿ ಕೂಡ ಶ್ರೀಧರಮ್ಮನಿಲ್ಲದೆ ಬದುಕುವುದಿಲ್ಲ ಎಂದು ನಿರ್ಧರಿಸುತ್ತಾರೆ. ಇಬ್ಬರೂ ಇಹಲೋಕಕ್ಕೆ ವಿದಾಯ ಹೇಳುತ್ತಾರೆ.
ಇದೀಗ ಅನಿಲ್ ವೀಡಿಯೋ ಹೊರಬಂದಿದೆ. ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಕಳೆದ ಕೆಲ ದಿನಗಳಿಂದ ಮದುವೆ ಸಿದ್ಧತೆಯ ಒತ್ತಡದಲ್ಲಿದ್ದೆ. ದೇವಾಲಯದ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದೆ. ಅಮ್ಮನ ಜೊತೆಗೆ ಬೇರೆ ಏನೂ ಸಂಬಂಧ ಹೊಂದಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದ ವಿಡಿಯೋ ಇದೀಗ ಹೊರಬಂದಿದೆ.