ಚೀನಾದ ಮಾಹಿತಿಗಳನ್ನು ಕಾನೂನುಬಾಹಿರವಾಗಿ ಹೊರಗೆ ರವಾನಿಸಿದ ಗೂಢಚಾರಿಕೆಯ ಆಪಾದನೆಯ ಮೇಲೆ ಕೆನಡಾದ ಮೈಕೆಲ್ ಸ್ಪಾವೊರ್ ಎಂಬ ಉದ್ಯಮಿಗೆ ಚೀನಾದಲ್ಲಿ ವಿಧಿಸಿದ 11 ವರ್ಷಗಳ ಸೆರೆಮನೆ ವಾಸ ಶಿಕ್ಷೆಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಖಂಡಿಸಿದ್ದಾರೆ.
ಉದ್ಯಮಿಯೊಬ್ಬರನ್ನು ಗೂಢಚಾರಿ ಎಂದು ಬಂಧಿಸಿ, ಅಂತಾರಾಷ್ಟ್ರೀಯ ಕಾನೂನುಗಳು ಯಾವುದನ್ನೂ ಅನುಸರಿಸದೆ ಜೈಲು ಶಿಕ್ಷೆ ವಿಧಿಸಿರುವುದು ಒಪ್ಪತಕ್ಕದ್ದಲ್ಲ ಎಂದು ಟ್ರೂಡೋ ಹೇಳಿದರು. ಸ್ಪಾವೊರ್ ರನ್ನು ಗೂಢಚಾರಿ ಎಂದು 2018ರಿಂದ ಬಂಧನದಲ್ಲಿ ಇಡಲಾಗಿದೆ. ಕೆನಡಾದಲ್ಲಿ ಚೀನಾದ ಹೂವೈಯ ಟೆಕ್ಕಿ ಒಬ್ಬರನ್ನು ಬಂಧಿಸಿದ್ದಕ್ಕೆ ಒತ್ತಡ ತಂತ್ರವಾಗಿ ಚೀನಾ ಈ ಬಂಧನ ನಡೆಸಿದೆ ಎನ್ನಲಾಗಿದೆ. ಒಬ್ಬ ಕೆನಡಾ ದೇಶೀಯನಿಗೆ ವಿಧಿಸಿದ ಮರಣದಂಡನೆಯನ್ನು ಎತ್ತಿ ಹಿಡಿದ ಮರುದಿನವೇ ಈ ಶಿಕ್ಷೆಯ ಆದೇಶ ಹೊರಬಿದ್ದಿದೆ.
ಒಂಟಾರಿಯೋದ ಪ್ರಧಾನಿ ಕಚೇರಿಯಿಂದ ಹೇಳಿಕೆ ಹೊರಡಿಸಿದ ಟ್ರೂಡೋ ಅವರು, ಸ್ಪಾವೊರ್ ರನ್ನು ಎರಡೂವರೆ ವರುಷಗಳ ಕಾಲ ಅನಿಯಂತ್ರಿತ ಬಂಧನದಲ್ಲಿ ಇಡಲಾಗಿತ್ತು. ಯಾವುದೇ ಪಾರದರ್ಶಕತೆ ಇಲ್ಲದೆ ವಿಚಾರಣೆ ನಡೆದಿರುವುದು ನ್ಯಾಯವಲ್ಲ. ಸ್ಪಾವೊರ್ ಅವರನ್ನು ಹಾಗೂ ಮೈಕೆಲ್ ಕೋವ್ರಿಗ್ ರನ್ನು ಕೂಡ ಬಿಡುಗಡೆ ಮಾಡಬೇಕು ಎಂದು ಹೇಳಿದರು. ಇಬ್ಬರನ್ನೂ ದೇಶಕ್ಕೆ ಬರಮಾಡಿಕೊಳ್ಳಲು ಎಲ್ಲ ಬಗೆಯ ಪ್ರಯತ್ನವನ್ನು ಕೆನಡಾ ಮುಂದುವರಿಸುವುದು ಎಂದೂ ಅವರು ಹೇಳಿದರು.