ಚೀನಾ: ಉನ್ನತ ತಂತ್ರಜ್ಞಾನ ಕಂಪೆನಿಗಳಾದ ಅಲಿಬಾಬಾ ಮತ್ತು ಬೈಡೂ ತಮ್ಮ ಡಿಜಿಟಲ್ ನಕ್ಷೆಗಳಿಂದ ಇಸ್ರೇಲ್‌ನ ಅಧಿಕೃತ ಹೆಸರನ್ನು ಡಿಲೀಟ್ ಮಾಡಿವೆ. ಈ ಮೂಲಕ ಪ್ಯಾಲೆಸ್ತೀನ್‌ಗೆ ಚೀನಾ ಬೆಂಬಲ ಮುಂದುವರೆದಿದೆ.
ಈ ಕಂಪೆನಿಗಳು ಇನ್ನು ಮುಂದೆ ಇಸ್ರೇಲ್‌ನ್ನು ಹೆಸರಿನಿಂದ ಉಲ್ಲೇಖಿಸುವುದಿಲ್ಲ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಬೈಡೂವಿನ ಚೈನೀಸ್ ಭಾಷೆಯ ಆನ್‌ಲೈನ್ ನಕ್ಷೆಗಳು ಇಸ್ರೇಲ್‌ನ ಅಂತಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಗಳು, ಹಾಗೆಯೇ ಪ್ಯಾಲೆಸ್ತೀನಿಯನ್ ಪ್ರದೇಶಗಳು ಮತ್ತು ಪ್ರಮುಖ ನಗರಗಳನ್ನು ಗುರುತಿಸುತ್ತವೆ, ಆದರೆ ದೇಶವನ್ನು ಹೆಸರಿನಿಂದ ಸ್ಪಷ್ಟವಾಗಿ ಗುರುತಿಸುವುದಿಲ್ಲ ಎಂದು ವರದಿ ಹೇಳಿದೆ.
ಆ ನಕ್ಷೆಯಲ್ಲಿ ಲಕ್ಸೆಂಬರ್ಗ್‌ನಂತಹ ಚಿಕ್ಕ ರಾಷ್ಟ್ರಗಳ ಹೆಸರುಗಳು ಇವೆ. ಆದರೆ ಇಸ್ರೇಲ್ ಹೆಸರು ಇಲ್ಲ. ಆದರೆ ಇಸ್ರೇಲ್‌ನ್ನು ಕೈಬಿಟ್ಟ ಚೀನಾದ ಕಂಪನಿಗಳು ತಮ್ಮ ಕ್ರಮದ ಹಿಂದೆ ಯಾವುದೇ ವಿವರಣೆಯನ್ನು ನೀಡಿಲ್ಲ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಸ್ವತಃ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿದ್ದನ್ನು ಗಮನಿಸಬಹುದಾಗಿದೆ. ಅಮೆರಿಕವು ಗಾಝಾ ಇತಿಹಾಸದ ಬಗ್ಗೆ ತಪ್ಪಾಗಿ ಚಿತ್ರಿಸಿದ್ದಕ್ಕಾಗಿ ಚೀನಾದ ಮಾಧ್ಯಮಗಳು ಛೀಮಾರಿ ಹಾಕುತ್ತಿವೆ ಎಂದು ಅವರು ಹೇಳಿದ್ದರು.
ಪ್ಯಾಲೆಸ್ತೀನ್ ಜನರು ಅನುಭವಿಸಿದ ಅನ್ಯಾಯ ಮುಂದುವರಿಯಬಾರದು ಎಂದು ಸೌದಿ ಅರೇಬಿಯಾದಲ್ಲಿ ಸಹಕಾರ ಮತ್ತು ಅಭಿವೃದ್ಧಿಗಾಗಿ ರಿಯಾದ್-ಗಲ್ಫ್-ಚೀನೀ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಚೀನಾ ಅಧ್ಯಕ್ಷರು ಹೇಳಿದ್ದಾರೆ.