ನ್ಯೂಯಾರ್ಕ್ : ಚೀನಾದ ಕ್ಸಿನ್ ಜಿಯಾಂಗ್ ನ ನಿರ್ಬಂಧಿತ ಪ್ರದೇಶದಲ್ಲಿ ಚೀನಾ ಸರಕಾರ ತೆರೆದಿರುವ ಮರು ಶಿಕ್ಷಣ ಕೇಂದ್ರಗಳಲ್ಲಿ ಮುಸ್ಲಿಮ್ ಮಹಿಳೆಯರ ಮೇಲೆ ವ್ಯವಸ್ಥಿತ ಅತ್ಯಾಚಾರ, ಹಿಂಸೆ, ದೌರ್ಜನ್ಯ ನಡೆಯುತ್ತಿದೆ ಎನ್ನಲಾದ ವರದಿಗಳ ಬಗ್ಗೆ ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ಕಳವಳ ವ್ಯಕ್ತಪಡಿಸಿದ್ದಾರೆ. ಮಾನವ ಹಕ್ಕುಗಳ ಆಯೋಗದ ಹೈಕಮೀಶನರ್ ಅಲ್ಲಿಗೆ ಭೇಟಿ ನೀಡಬೇಕೆಂದು ಹೇಳಿದ್ದಾರೆ.
ಶಿಬಿರಗಳಲ್ಲಿರುವ ಉಯಿಘುರ್ ಮಹಿಳೆಯರ ಮೇಲೆ ವ್ಯವಸ್ಥಿತ ಅತ್ಯಾಚಾರ, ಹಿಂಸೆ, ದೌರ್ಜನ್ಯ ಎಸಗುತ್ತಿರುವ ಬಗ್ಗೆ ಬ್ರಿಟನ್ ಮೂಲದ ಸುದ್ದಿ ಸಂಸ್ಥೆ ‘ಸ್ಪುಟ್ನಿಕ್’ ವರದಿ ಮಾಡಿತ್ತು.
“ವರದಿಯಲ್ಲಿರುವ ಆರೋಪಗಳ ಸ್ವರೂಪ ಮತ್ತು ಈ ಆರೋಪಗಳನ್ನು ಶಿಬಿರಾಧಿಕಾರಿಗಳು ನಿರಾಕರಿಸಿರುವುದನ್ನು ಮಾನವ ಹಕ್ಕುಗಳ ಆಯೋಗ ಗಣನೆಗೆ ತೆಗೆದುಕೊಳ್ಳಬೇಕು. ಆಯೋಗದ ಉದ್ದೇಶಿತ ಧ್ಯೇಯಕ್ಕೆ ಅನುಗುಣವಾಗಿ ಹಿಂದೆಂದಿಗಿಂತಲೂ ಮುಖ್ಯವಾಗಿ ಈಗ ಹೈಕಮೀಶನರ್ ಅವರು ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ನನಗನಿಸುತ್ತದೆ” ಎಂದು ಡುಜಾರಿಕ್ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ. ಉಯಿಘುರ್ ಸಮುದಾಯದ ಮಹಿಳೆಯರು ಮತ್ತು ಇತರ ಮುಸ್ಲಿಂ ಮಹಿಳೆಯರ ಮೇಲೆ ನಿರ್ಬಂಧಿತ ಪ್ರದೇಶಗಳಲ್ಲಿರುವ ಶಿಬಿರಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ವರದಿಯಿಂದ ನಾವು ತುಂಬಾ ವಿಚಲಿತರಾಗಿದ್ದೇವೆ. ಈ ಆಘಾತಕಾರಿ ಆರೋಪದ ಬಗ್ಗೆ ಅಂತಾರಾಷ್ಟ್ರೀಯ ಪರಿವೀಕ್ಷಕರು ತಕ್ಷಣವೇ ಸ್ವತಂತ್ರ ತನಿಖೆ ನಡೆಸಲು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಅಧಿಕಾರಿಗಳು ಅವಕಾಶ ನೀಡಬೇಕು” ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಮೂಲಗಳು ತಿಳಿಸಿವೆ.