ನವದೆಹಲಿ: ಮಕ್ಕಳನ್ನು ಅಶ್ಲೀಲವಾಗಿ ಬಳಸಿದ ಫೋಟೋ ಮತ್ತು ವೀಡಿಯೋಗಳ ಪ್ರಸಾರ ಸಂಬಂಧ ದೆಹಲಿಯಲ್ಲಿ 160 ಪ್ರಕರಣಗಳನ್ನು ದಾಖಲಿಸಲಾಗಿದ್ದು, 80 ಜನರನ್ನು ಬಂಧಿಸಲಾಗಿದೆ. ಎನ್ ಸಿಆರ್ ಬಿ- ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದಿಂದ ದೆಹಲಿ ಪೋಲೀಸರಿಗೆ ಈ ಬಗ್ಗೆ ಮತ್ತೆ ಮತ್ತೆ ದೂರು ಹೋಗಿದೆ. ಆ ಸಂಬಂಧ ಅಮೆರಿಕ ಸಂಯುಕ್ತ ಸಂಸ್ಥಾನದ ಖಾಸಗಿ ಸಂಸ್ಥೆಯೊಂದರ ಜೊತೆ ಪರಸ್ಪರ ತಿಳಿವಳಿಕೆಯ ಒಪ್ಪಂದವೊಂದನ್ನು ಮಾಡಿಕೊಳ್ಳಲಾಯಿತು.
ಕಳೆದ ಎರಡು ದಿನಗಳಲ್ಲಿ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಪೊಲೀಸರು ಚೈಲ್ಡ್ ಪೋರ್ನೋಗ್ರಪಿ ಸಂಬಂಧ 80 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನವರೆಲ್ಲರೂ ಸಾಮಾಜಿಕ ಜಾಲ ತಾಣಗಳಲ್ಲಿ ಮಕ್ಕಳ ರತಿ ಸಂಬಂಧಿ ವೀಡಿಯೋ ಮತ್ತು ಫೋಟೋಗಳನ್ನು ಅಪ್ ಲೋಡ್ ಮಾಡಿದವರಾಗಿದ್ದಾರೆ.
ದೆಹಲಿ ಪೊಲೀಸರು ಒಪ್ಪಂದ ಮಾಡಿಕೊಂಡ ಅಮೆರಿಕದ ಖಾಸಗಿ ಸಂಸ್ಥೆಯು ಈ ಸಂಬಂಧ 500 ದೂರುಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದೆ. ಐಎಫ್ ಎಸ್ ಓ ಘಟಕದ ವಿಶೇಷ ಕೋಶದ ಡಿಸಿಪಿ ಕೆ. ಪಿ. ಎಸ್. ಮಲ್ಹೋತ್ರಾ ಅವರು ಈ ಬಂಧನ ಮತ್ತು ಪ್ರಕರಣ ಹೂಡಿರುವ ಬಗೆಗಿನ ಮಾಹಿತಿ ನೀಡಿದ್ದಾರೆ. ಹಿಂದೆಯೂ ಐಎಫ್ ಎಸ್ ಓ ಘಟಕದ ವಿಶೇಷ ಕೋಶದವರು ಮಾಸೂಮ್- ಮಿಟಿಗೇಶನ್ ಆಫ್ ಎಡೋಲ್ಸೆಂಟ್ ಸೆಕ್ಸುಅಲಿ ಒಫೆನ್ಸಿವ್ ಆನ್ ಲೈನ್ ಮೆಟೀರಿಯಲ್ ಎಂದು ಮಕ್ಕಳ ರತಿ ಬಳಕೆ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು. ತಪ್ಪಾಗಿ ಮಕ್ಕಳ ಬಳಕೆ ಮತ್ತು ನಾಪತ್ತೆಯಾದ ಮಕ್ಕಳ ಸಂಬಂಧವಾಗಿಯೂ ಬೇರೆ ದೃಷ್ಟಿಕೋನದಿಂದ ತನಿಖೆ ನಡೆಯುತ್ತದೆ. ಎನ್ ಸಿಎಂಇಸಿ- ನಾಪತ್ತೆಯಾದ ಮತ್ತು ದುರ್ಬಳಕೆಯಾದ ಮಕ್ಕಳ ರಾಷ್ಟ್ರೀಯ ಕೇಂದ್ರ ಹಾಗೂ ಎನ್ ಸಿಆರ್ ಬಿ ಸಹ ಈ ನಿಟ್ಟಿನಲ್ಲಿ ಪತ್ತೆ ಕಾರ್ಯ ನಡೆಸುತ್ತದೆ ಎಂದು ಸಹ ಮಲ್ಹೋತ್ರಾ ಹೇಳಿದರು.
ಅಮೆರಿಕದ ಖಾಸಗಿ ಸಂಸ್ಥೆ ಎನ್ ಸಿಎಂಇಸಿ ಮತ್ತು ದೇಶದ ಎನ್ ಸಿಆರ್ ಬಿ ನಡುವೆ ಆಗಿರುವ ಪರಸ್ಪರ ತಿಳಿವಳಿಕೆ ಒಪ್ಪಂದದ ಪ್ರಕಾರ ಇಕ್ಕಡೆಗೂ ಮಾಹಿತಿ ಹಂಚಿಕೆ ಆಗುತ್ತದೆ. ಮಕ್ಕಳ ಲೈಂಗಿಕ ಬಳಕೆ ಮತ್ತು ಜಾಲ ತಾಣದಲ್ಲಿ ಆ ಸಂಬಂಧದ ಕ್ಲಿಪ್ಪಿಂಗ್ ಹಾಕುವ ಬಗ್ಗೆ ಬರುವ ದೂರು, ಸಿಕ್ಕ ಮಾಹಿತಿಗಳು ಈ ಸಂಸ್ಥೆಗಳ ನಡುವೆ ಗುಪ್ತವಾಗಿ ವಿನಿಮಯ ಆಗುತ್ತದೆ. ನಾನಾ ಜಾಲ ತಾಣ ವೇದಿಕೆಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮೊದಲಾದವುಗಳಲ್ಲಿ ಇಂಥವುಗಳ ಓಡಾಟದ ಬಗೆಗೂ ಗಮನ ನೀಡಲಾಗುತ್ತದೆ.
ದೆಹಲಿಯಲ್ಲಿ ಚೈಲ್ಡ್ ಪೋರ್ನೋಗ್ರಪಿ ವಿರುದ್ಧ ಸತತ ಕಾರ್ಯಾಚರಣೆಗಳು ನಡೆಯುತ್ತಿದ್ದರೂ ಒಂದೆಡೆ ಅಂಗಡಿ ಮುಚ್ಚುವಾಗ ಇನ್ನೊಂದೆಡೆ ಅಂಗಡಿ ತೆರೆದುಕೊಳ್ಳುತ್ತದೆ. ಇದು ಎಲ್ಲ ಪಟ್ಟಣಗಳ ಕತೆಯೂ ಆಗಿದ್ದು, ಈಗೀಗ ಗ್ರಾಮೀಣ ಪ್ರದೇಶಗಳಿಗೂ ಹರಡುತ್ತಿರುವ ಪೀಡೆಯಾಗಿದೆ.
ಒಂದು ಸಾಮಾಜಿಕ ಜಾಲ ತಾಣದಲ್ಲಿ ಅಶ್ಲೀಲ ವಿಷಯ ಕಂಡುಬಂದಾಗ ಅದರ ಐಪಿ ವಿಳಾಸವನ್ನು ಅಮೆರಿಕದ ಸಂಸ್ಥೆಯು ಒಪ್ಪಂದ ಮಾಡಿಕೊಂಡ ಸಂಸ್ಥೆಗೆ ರವಾನಿಸುತ್ತದೆ. ಸಾಮಾನ್ಯವಾಗಿ ಇವೆಲ್ಲ ನಕಲಿ ಹೆಸರಿನಲ್ಲಿ ಇರುತ್ತವೆ. ಆದರೆ ಅದರ ಮೂಲಕ ಅಪ್ ಲೋಡ್ ಆಗುವ ಸ್ಥಳ, ಸಮಯ ಇತ್ಯಾದಿಯನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಆದ್ದರಿಂದ ದೇಶೀಯ ತನಿಖಾ ಸಂಸ್ಥೆಗಳು ಆಗ ಮಕ್ಕಳ ಮುಕ್ಕರನ್ನು ಪತ್ತೆ ಮಾಡಿ ಹೆಡೆಮುಡಿ ಕಟ್ಟುತ್ತವೆ