ಚಿಕ್ಕಮಗಳೂರು: ಜಿಲ್ಲಾಧ್ಯಕ್ಷರನ್ನು ಬಂಧಿಸಿ ಅವಮಾನ| ಪೊಲೀಸ್ ಅಧಿಕಾರಿ ವಿರುದ್ಧ SDPI ಪ್ರತಿಭಟನೆ

Prasthutha|

ಚಿಕ್ಕಮಗಳೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರನ್ನು ಬಂಧಿಸಿ ಅವಮಾನಿಸಿರುವ ಚಿಕ್ಕಮಗಳೂರು ನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀನಿವಾಸ್ ವಿರುದ್ಧ ಚಿಕ್ಕಮಗಳೂರಿನ ಆಝಾದ್ ಪಾರ್ಕ್ ವೃತ್ತದಲ್ಲಿ SDPI ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಝ್ಮತ್ ಪಾಷ, ಚಿಕ್ಕಮಗಳೂರು ನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀನಿವಾಸ್ ಮತ್ತು ತಂಡ ಮಂಗಳವಾರ ಮಧ್ಯರಾತ್ರಿ 12.45 ರ ಸಮಯದಲ್ಲಿ SDPI ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಗೌಸ್ ಮುನೀರ್ ರವರ ಮನೆಗೆ ಏಕಾಏಕಿ ಬಂದು ಯಾವುದೇ ನೋಟಿಸ್ ಅಥವಾ ಸಮನ್ಸ್ ಸಹ ನೀಡದೆ ವಿನಃ ಕಾರಣ ಬಂಧಿಸಿ, ವಿಚಾರಣೆ ನಡೆಸಲು ಬಸವನಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸುಮಾರು 2,3 ಗಂಟೆ ವಿಚಾರಣೆ ನಡೆಸಿ ರಾತ್ರಿ 4 ಗಂಟೆಯ ಸಮಯದಲ್ಲಿ ಮನೆಗೆ ಕಳುಹಿಸಿರುತ್ತಾರೆ, ಹಾಗೂ ವಿಚಾರಣೆಯ ಸಂದರ್ಭದಲ್ಲಿ ಮೊಬೈಲ್ ಕಸಿದು ಕೊಂಡು, ಏಕವಚನದಲ್ಲಿ ಬೈದು, ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸಿ, ಅಧಿಕಾರ ದರ್ಪ ಬಳಸಿ ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆ ಎಂದು ಆರೋಪಿಸಿದರು.

- Advertisement -

ಚಿಕ್ಕಮಗಳೂರು ನಗರ ವೃತ್ತ ನಿರೀಕ್ಷಕರಾದ ಶ್ರೀನಿವಾಸ್ ರವರು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮಾಡಿದ್ದು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯ ನಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರ ಮುಖಾಂತರ ಡಿ.ಜಿ.ಪಿ ಯವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷರಾದ ದಂಟರಮಕ್ಕಿ ಶ್ರೀನಿವಾಸ್, ಜಿಲ್ಲಾ ಸಮಿತಿ ಸದಸ್ಯರಾದ ಜಮೀಲ್ ಖಾನ್, ಭೀಮ್ ಆರ್ಮಿ ಸಂಘಟನೆಯ ಹೊನ್ನೇಶ್, ಸಮಾಜ ಸೇವಕ ಆತಿಖ್, ಜನಶಕ್ತಿ ಸಂಘಟನೆಯ ಗೌಸ್ ಮೊಹಿದ್ದೀನ್, ಹೊನ್ನಪ್ಪರವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

- Advertisement -