ಬ್ರಹ್ಮಪುರಂ ಕಸದ ರಾಶಿಗೆ ಬೆಂಕಿ; ಕೊಚ್ಚಿ ಮನಪಾಕ್ಕೆ 100 ಕೋಟಿ ರೂ. ದಂಡ

Prasthutha|

ಕೊಚ್ಚಿ: ಕೊಚ್ಚಿ ಮಹಾನಗರ ಪಾಲಿಕೆಯು ದೀರ್ಘ ಕಾಲದಿಂದ ತನ್ನ ಕರ್ತವ್ಯವನ್ನು ಕಡೆಗಣಿಸಿದ್ದರಿಂದ ಬ್ರಹ್ಮಪುರಂ ತ್ಯಾಜ್ಯ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಪರಿಸರ ಮಾಲಿನ್ಯವಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯ ಪೀಠ- ಎನ್’ಜಿಟಿ ಹೇಳಿದ್ದು, ಈ ಸಂಬಂಧ ಕೊಚ್ಚಿ ಮನಪಾಕ್ಕೆ ರೂ. 100 ಕೋಟಿ ದಂಡ ವಿಧಿಸಿದೆ.
ಕೊಚ್ಚಿಯ ಕಸ ಸುರಿಯುವ ಪ್ರದೇಶ ಬ್ರಹ್ಮಪುರಂ. ಮನಪಾ ಕರ್ತವ್ಯ ನಿರ್ಲಕ್ಷ್ಯ ತೋರಿದ್ದರಿಂದ ಬೆಂಕಿ ಕಾಣಿಸಿಕೊಳ್ಳಲು ಕಾರಣ ಎಂದು ಎನ್ ಜಿಟಿ ಹೇಳಿದೆ. ಬೆಂಕಿಯು ಸುತ್ತು ಪರಿಸರವನ್ನು ನುಂಗಿದೆ. ಹತ್ತಿರದಲ್ಲಿ ವಾಸಿಸುವ ಜನರು ಉಸಿರಾಟದ ಸಮಸ್ಯೆಗೆ ಸಿಲುಕಿದ್ದಾರೆ. ಈ ಸಂಬಂಧ ಮಾರ್ಚ್ 4ರಂದು ಸುತ್ತುಮುತ್ತಲಿನವರಿಗೆ ಮಾಸ್ಕ್ ಧರಿಸುವಂತೆ ಆರೋಗ್ಯ ಸಲಹಾ ಸಮಿತಿ ಸೂಚಿಸಿತ್ತು.
120 ಆಮ್ಲಜನಕ ಸಹಿತದ ಬೆಡ್ ಗಳನ್ನು ಸಿದ್ಧ ಪಡಿಸಲಾಗಿದೆ, 30 ಅಗ್ನಿಶಾಮಕ ವಾಹನಗಳು, 14 ಭಾರೀ ಶಕ್ತಿಯ ನೀರಿನ ಪಂಪ್ ಗಳು, ನಾಲ್ಕು ಹೆಲಿಕಾಪ್ಟರ್ ಗಳು, 350 ಬೆಂಕಿ ಆರಿಸುವ ಸಿಬ್ಬಂದಿಗಳನ್ನು ಅಲ್ಲಿ ಸಜ್ಜುಗೊಳಿಸಲಾಗಿತ್ತು ಎಂದು ವರದಿಯಾಗಿದೆ.
ಮಾರ್ಚ್ 2ರಂದು ಇಲ್ಲಿ ಹೊತ್ತಿಕೊಂಡ ಬೆಂಕಿಯಿಂದಾಗಿ ಭಾರೀ ವಾಯು ಮಾಲಿನ್ಯ ಉಂಟಾದುದಲ್ಲದೆ, ಸಾರ್ವಜನಿಕರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಲಾಗಿದೆ.
ಕೊಚ್ಚಿ ಮನಪಾ ತುಂಬ ಕಾಲದಿಂದ ಕರ್ತವ್ಯ ವಿಮುಖವಾದುದೇ ಈ ಬೆಂಕಿಗೆ ಕಾರಣ ಎಂಬ ನಿರ್ಣಯಕ್ಕೆ ಎನ್ ಜಿಟಿ ಬಂದಿದೆ. ಸಂತ್ರಸ್ತರಿಗೆ ಸರ್ವ ಸಹಾಯ ಮತ್ತು ಪರಿಹಾರ ವಿತರಿಸುವಂತೆಯೂ ಎನ್ ಜಿಟಿ ಆದೇಶ ನೀಡಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮ ಆಡಳಿತ ನಿರ್ವಹಣೆ ಇರಬೇಕಿತ್ತು. ಅದಿರಲಿಲ್ಲ; ಸಾರ್ವಜನಿಕರ ಹಿತ ದೃಷ್ಟಿಯಿಂದ ತನಿಖೆ ನಡೆಸುವಂತೆಯೂ ಎನ್ ಜಿಟಿ ಹೇಳಿದೆ.
ರಾಜ್ಯ ಸರಕಾರವೂ ಇದನ್ನು ಗಮನಿಸಿಲ್ಲ. ಸಂವಿಧಾನವನ್ನು ಮತ್ತು ಪರಿಸರ ಕಾಯ್ದೆಯನ್ನು ಸರಕಾರ ಎತ್ತಿ ಹಿಡಿಯಬೇಕು ಎಂದೂ ಎನ್ ಜಿಟಿ ಹೇಳಿದೆ.



Join Whatsapp