ಚಿಕ್ಕಮಗಳೂರು: ಸ್ಮಶಾನಗಳ ಕೊರತೆ; ಶವ ಸಂಸ್ಕಾರಕ್ಕೆ ಪರದಾಡಬೇಕಾದ ಪರಿಸ್ಥಿತಿ

Prasthutha|

ಚಿಕ್ಕಮಗಳೂರು: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸ್ಮಶಾನಗಳೇ ಇಲ್ಲದೇ ಶವ ಸಂಸ್ಕಾರಕ್ಕೆ ಪರದಾಡಬೇಕಾದ ಪರಿಸ್ಥಿತಿಯುಂಟಾಗಿದೆ.

- Advertisement -

ಜಿಲ್ಲಾಡಳಿತದ ಅಂಕಿಅಂಶ ಪ್ರಕಾರ ಜಿಲ್ಲೆಯ1,142 ಗ್ರಾಮಗಳ ಪೈಕಿ 75 ಗ್ರಾಮಗಳಲ್ಲಿ ಸ್ಮಶಾನ ಇಲ್ಲ ಎಂದು ತಿಳಿದು ಬಂದಿದೆ. ಕೆಲವು ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿದ್ದರೆ, ಬಹುತೇಕ ಕಡೆಗಳಲ್ಲಿ ಸ್ಮಶಾನ ಇದ್ದರೂ ನಿರ್ವಹಣೆಯ ಕೊರತೆಯಿದೆ. ಕೆಲವರು ಸ್ಮಶಾನವನ್ನೂ ಒತ್ತುವರಿ ಮಾಡಿದ್ದಾರೆ.

ಕಲ್ಯಾಣನಗರದ ನಾಲ್ಕನೇ ಹಂತದ ಐದನೇ ಮುಖ್ಯರಸ್ತೆ ಕೊನೆಯ ಭಾಗದಲ್ಲಿರುವ ಸ್ಮಶಾನ ಅವ್ಯವಸ್ಥೆಯ ಆಗರವಾಗಿದ್ದು, ಪ್ರವೇಶ ದ್ವಾರದ ಬಳಿ ಗಿಡ,ಗಂಟಿ ಪೊದೆಗಳು ಬೆಳೆದು, ಶವ ಒಯ್ಯಲು ಹರಸಾಹಸ ಪಡಬೇಕಾಗಿದೆ.

- Advertisement -

ಹಲವೆಡೆ ತೋಟ, ಜಮೀನುಗಳಲ್ಲಿ ಶವಸಂಸ್ಕಾರ ನೆರವೇರಿಸಲಾಗುತ್ತಿದ್ದು, ತೋಟ, ಜಮೀನು ಇಲ್ಲದವರು ಪರದಾಡಬೇಕಾಗಿದೆ.

ತಾಂತ್ರಿಕ ಸಮಸ್ಯೆಯಿಂದಾಗಿ ಮಲೆನಾಡಿನ ಕೆಲವೆಡೆ ಸ್ಮಶಾನಕ್ಕೆ ಜಾಗ ನೀಡುವುದು ಕಗ್ಗಂಟಾಗಿದ್ದು, ಬಯಲುಸೀಮೆಯಲ್ಲಿ ಸರ್ಕಾರಿ ಜಾಗದ ಕೊರತೆ ಇದೆ ಎಂದು ಅಧಿಕಾರಿಗಳು ಕಾರಣ ತಿಳಿಸುತ್ತಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರು ಅಂತ್ಯ ಸಂಸ್ಕಾರಕ್ಕೆ ಸಮಸ್ಯೆ ಎದರಿಸುತ್ತಿದ್ದಾರೆ. ‘ಪರಿಶಿಷ್ಟ ಜಾತಿ ಕುಟುಂಬಗಳು ಹೆಚ್ಚು ಇರುವ ರಂಗಾಪುರದಲ್ಲಿ ಸ್ಮಶಾನ ಇಲ್ಲದೇ  ಅರಣ್ಯ ಪ್ರದೇಶದಲ್ಲಿ ಸಂಸ್ಕಾರ ಮಾಡಲಾಗುತ್ತಿದೆ.

ಕೆಲವು ಗ್ರಾಮಗಳಲ್ಲಿ ಸ್ಮಶಾನ ಜಾಗವನ್ನು ಅರಣ್ಯಕ್ಕೆ ಸೇರಿಸಿದ್ದು, ನಾಲ್ಕಾರು ಕಿಲೋ ಮೀಟರ್ ದೂರ ಶವ ಹೊತ್ತೊಯ್ದು ಅಂತ್ಯಕ್ರಿಯೆ ನಡೆಸಬೇಕಾದ ಪರಿಸ್ಥಿತಿ ಇದೆ.

ಕಳಸ ಪಟ್ಟಣದ ಹಿಂದೂ ರುದ್ರಭೂಮಿ ಮತ್ತು ಮುಸ್ಲಿಮರ ಸ್ಮಶಾನ ಅಕ್ಕಪಕ್ಕದಲ್ಲೇ ಇದೆ. ಆದರೆ ಈ ಸ್ಮಶಾನಗಳಿಗೆ ತಲುಪುವ ರಸ್ತೆ ತೀರಾ ಹದಗೆಟ್ಟಿದ್ದು, ರಸ್ತೆ ದುರಸ್ತಿಯನ್ನು ಉಪೇಕ್ಷೆ ಮಾಡಲಾಗಿದೆ.



Join Whatsapp