►ಶೆಟ್ಟರ್, ಶೋಭಾ, ಯತ್ನಾಳ್ ಹೆಸರು ಮುಂಚೂಣಿಗೆ
ಬೆಂಗಳೂರು; ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಂಡು ಕಂಗಾಲಾದ ಬಿಜೆಪಿ ಹೈಕಮಾಂಡ್ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಈ ಕುರಿತು ಬಿಜೆಪಿ ವಲಯದಲ್ಲೇ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ಈ ಪ್ರಕ್ರಿಯೆ ಬಿರುಸು ಪಡೆಯಲಿದೆ.
ಸಿದ್ದರಾಮೋತ್ಸವದಲ್ಲಿ ಉತ್ತರ ಕರ್ನಾಟಕದಿಂದಲೇ ಹೆಚ್ಚು ಜನ ಭಾಗಿಯಾಗಿರುವ ಜೊತೆಗೆ ಲಿಂಗಾಯಿತ ಸಮುದಾಯ ಕಾಂಗ್ರೆಸ್ ನತ್ತ ಮುಖ ಮಾಡುತ್ತಿರುವ ಬಗ್ಗೆ ದೆಹಲಿಗೆ ರಹಸ್ಯ ವರದಿ ರವಾನೆಯಾಗಿದೆ. ಇದರಿಂದ ವಿಚಲಿತವಾಗಿರುವ ವರಿಷ್ಠರು ಸ್ಲ್ಯಾಗ್ ಓವರ್ ನಲ್ಲಿ ಸಿಕ್ಸರ್ ಭಾರಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಸೂಕ್ತ ಬದಲಾವಣೆ ಮಾಡದಿದ್ದರೆ ಪರಿಸ್ಥಿತಿ ಕೈಮೀರಲಿದೆ ಎಂದು ಬಿಜೆಪಿಯ ಅಂತರಿಕ ಸಮೀಕ್ಷಾ ವರದಿ ಸಹ ಬಿಜೆಪಿ ವರಿಷ್ಠರಿಗೆ ನಿದ್ದೆಗೆಡುವಂತೆ ಮಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪರ್ಯಾಯವಾಗಿ ಸದ್ಯಕ್ಕೆ ಜಗದೀಶ್ ಶೆಟ್ಟರ್ ಹೆಸರು ಮಂಚೂಣಿಗೆ ಬಂದಿದೆ. ಅಮಿತ್ ಶಾ ಬೆಂಗಳೂರಿಗೆ ಬಂದಿದ್ದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಈ ಸಂಬಂಧ ಸೂಚ್ಯವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರುಗಳು ಸಹ ವರಿಷ್ಠರ ಪರಿಶೀಲನೆಯಲ್ಲಿವೆ.
ಸಧ್ಯದಲ್ಲೇ ಹಾಲಿ ನಾಯಕತ್ವದಲ್ಲಿ ಬದಲಾವಣೆ ಮಾಡುವ ಕುರಿತು ಮಾಹಿತಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಬಳಿಕ ಬಸವರಾಜ ಬೊಮ್ಮಾಯಿ ಅವರೊಂದಿಗೂ ಸಹ ಈ ಬಗ್ಗೆ ಚರ್ಚಿಸಿ ಬದಲಾವಣೆಗೆ ಸಿದ್ಧರಿರುವಂತೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಅಧಿಕಾರದ ಹೆಬ್ಬಾಗಿಲಾಗಿದ್ದು, ಸಧ್ಯಕ್ಕೆ ಬಿಜೆಪಿ ಅಧಿಕಾರದಲ್ಲಿದ್ದರೂ ಮುಂದಿನ ಚುನಾವಣೆ ವೇಳೆಗೆ ಅದು ಕೈ ತಪ್ಪವ ಆತಂಕವಿದೆ. ಕಾಂಗ್ರೆಸ್ ದಿನಕಳೆದಂತೆಲ್ಲಾ ಹೆಚ್ಚೆಚ್ಚು ಬಲವಾಗುತ್ತಿದ್ದು, ಅದು ಕೂಡ ಬಿಜೆಪಿಯ ಭದ್ರ ಕೋಟೆಯಂತಿರುವ ಉತ್ತರ ಕರ್ನಾಟಕಕ್ಕೆ ಲಗ್ಗೆ ಇಡುತ್ತಿರುವುದು ಬಿಜೆಪಿಗೆ ತಲೆ ನೋವಾಗಿದೆ. ಹೀಗಾಗಿ ಬದಲಾವಣೆ ಆಗುವುದಿದ್ದರೆ ಇದು ಸೂಕ್ತ ಕಾಲ ಎಂಬ ನಿಲುವಿಗೆ ಬಂದಿದೆ.
ಶೆಟ್ಟರ್ ಜಾತಿಯಲ್ಲಿ ಬಣಜಿಗ ಲಿಂಗಾಯಿತ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕ, ಹಗರಣ-ಭ್ರಷ್ಟಾಚಾರದ ಸೋಂಕಿಲ್ಲ. ಎಲ್ಲರನ್ನು ಸಾಮೂಹಿಕವಾಗಿ ಕರೆದೊಯ್ಯಬಲ್ಲರು ಎಂಬ ವಿಶ್ವಾಸವನ್ನು ಹೈಕಮಾಂಡ್ ಹೊಂದಿದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶೆಟ್ಟರ್ ಆಯ್ಕೆ ಸೂಕ್ತ ಎಂಬ ಚರ್ಚೆ ನಡೆಯುತ್ತಿದೆ.
ಇನ್ನು ಶೋಭಾ ಕರಂದ್ಲಾಜೆ ಹೆಸರು ಸಹ ತೇಲಿ ಬಂದಿದೆ. ವಕ್ಕಲಿಗರಿಗೆ ಅವಕಾಶ ಕಲ್ಪಿಸುವ ಜೊತೆಗೆ ಕೈತಪ್ಪುತ್ತಿರುವ ಕರಾವಳಿ ಭಾಗಕ್ಕೆ ವಿಶೇಷ ಒತ್ತು ನೀಡಿದಂತಾಗುತ್ತದೆ ಎಂಬ ಚರ್ಚೆ ಬಿಜೆಪಿ ವಲಯದಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯದ ಇತಿಹಾಸದಲ್ಲಿ ಮಹಿಳೆಯೊಬ್ಬಳಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ ಹೆಗ್ಗಳಿಕೆ ಬಿಜೆಪಿದ್ದು ಎನ್ನುವ ಸಂದೇಶ ರವಾನಿಸುವ ತಂತ್ರಗಾರಿಕೆಯೂ ಇದರ ಹಿಂದೆ ಅಡಗಿದೆ.
ಬಿಜೆಪಿ ಸರ್ಕಾರ ಹಳಿ ತಪ್ಪಿದಾಗಲೆಲ್ಲಾ ಎಚ್ಚರಿಸುವ ಕೆಲಸ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಕಟ್ಟರ್ ಹಿಂದುತ್ವದ ಪ್ರತಿನಿಧಿ. ಪಕ್ಷದ ಫೈರ್ ಬ್ರ್ಯಾಂಡ್ ಎನ್ನುವ ಹೆಗ್ಗಳಿಕೆ ಇದೆ. 30ನೇ ವರ್ಷಕ್ಕೆ ಕೇಂದ್ರ ಸಚಿವರಾಗಿ ಕೆಲಸ ಮಾಡಿರುವುದರಿಂದ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಯಾವುದೇ ಭ್ರಷ್ಟಾಚಾರ-ಅಕ್ರಮ-ಅವ್ಯವಹಾರಗಳಲ್ಲಿ ಯತ್ನಾಳ್ ಹೆಸರು ಕೇಳಿ ಬಂದಿಲ್ಲ. ಅವರು ಸ್ವಲ್ಪ ವಾಚಾಳಿ ಎನ್ನುವುದನ್ನು ಬಿಟ್ಟರೆ ಕ್ಲೀನ್ ಇಮೇಜ್ ರಾಜಕಾರಣಿ ಎನ್ನುವ ಹೆಸರು ಪಡೆದುಕೊಂಡಿದ್ದಾರೆ. ನಾನು ಹೈಕಮಾಂಡ್ ಗೆ ಬಿಟ್ಟರೆ ಬೇರೆ ಯಾರಿಗೂ ಹೆದರುವುದಿಲ್ಲ ಎನ್ನುವ ಮೂಲಕ ಹೈಕಮಾಂಡ್ ವಿಶ್ವಾಸ ಗಳಿಸಿರುವ ಹಿರಿಮೆ ಯತ್ನಾಳ್ ರದ್ದು.
ಅದೆಲ್ಲಕ್ಕಿಂತ ಹೆಚ್ಚಾಗಿ ಯತ್ನಾಳ್ ಪಂಚಮಸಾಲಿ ಸಮುದಾಯದವರು. ಉತ್ತರ ಕರ್ನಾಟಕದಲ್ಲಿ ಪ್ರಬಲ ಸಮುದಾಯವಾಗಿರುವ ಪಂಚಮಸಾಲಿ ಸಮುದಾಯಕ್ಕೆ ಸಿಎಂ ಕೊಡಬೇಕೆನ್ನುವ ಕೂಗು ಮೊದಲಿಂದಲೂ ಬಲವಾಗಿದೆ. ನಾನು ಕೂಡ ಸಿಎಂ ಆಕಾಂಕ್ಷಿ ಎಂದು ಮೊದಲಿನಿಂದಲೂ ಯತ್ನಾಳ್ ಹೇಳಿಕೊಂಡೇ ಬಂದಿದ್ದಾರೆ.
ಅದೆಲ್ಲಕ್ಕಿಂತ ಹೆಚ್ಚಾಗಿ ಉತ್ತರ ಕರ್ನಾಟಕದ ಸುಮಾರು 65-75 ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮುದಾಯದವರು ನಿರ್ಣಾಯಕ ಮತದಾರರು. ಅಲ್ಲದೇ ಆ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಪಡೆದವರೇ ಮುಖ್ಯಮಂತ್ರಿ ಆಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ನಿದರ್ಶನ. ಇದೇ ರೀತಿಯ ಸೂತ್ರವನ್ನು ಹೈಕಮಾಂಡ್ ಸಿದ್ಧಪಡಿಸಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋವಿಡ್ ಸೋಂಕಿನಿಂದ ಹೊರ ಬಂದ ನಂತರ ರಾಜಕೀಯವಾಗಿ ಸಾಕಷ್ಟು ಬದಲಾವಣೆಯಾಗುವ ನಿರೀಕ್ಷೆಯಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಹಾಗೂ ಸಚಿವರ ಬದಲಾವಣೆ ವಿಷಯ: ಇದಕ್ಕೂ ನಮಗೂ ಸಂಬಂಧವಿಲ್ಲ. ಅವರು ಯಾರನ್ನಾದರೂ ಮುಖ್ಯಮಂತ್ರಿ, ಮಂತ್ರಿ ಮಾಡಿಕೊಳ್ಳಲಿ. ಅದು ಅವರಿಗೆ ಬಿಟ್ಟ ವಿಚಾರ. ರಾಜ್ಯದಲ್ಲಿ ಪ್ರವಾಹ ಹೆಚ್ಚಾಗಿದ್ದು, ಭ್ರಷ್ಟಾಚಾರ ಹೆಚ್ಚಾಗಿದೆ. ಉತ್ತಮ ಆಡಳಿತ ನೀಡಿ ಜನರಿಗೆ ನ್ಯಾಯ ಒದಗಿಸಿಕೊಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ.