‘ವಿಶ್ವ ಯುವ ಕೌಶಲ್ಯ’ ದಿನಾಚರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ

Prasthutha|

ಬೆಂಗಳೂರು, ಜುಲೈ 15: ರಾಜ್ಯ ಯುವಶಕ್ತಿಯ ಕೌಶಲ್ಯ ಅಭಿವೃದ್ಧಿಯಿಂದ ‘ಕೌಶಲ್ಯ ಕರ್ನಾಟಕದ ನಿರ್ಮಾಣವು ಸಾಧ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಆಯೋಜಿಸಿರುವ‘ವಿಶ್ವ ಯುವ ಕೌಶಲ್ಯ’ ದಿನಾಚರಣೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.

- Advertisement -


ಈ ಸಂದರ್ಭದಲ್ಲಿ ಮಾತನಾಡಿನ ಅವರು, ದೇಶವೊಂದರ ಅಭಿವೃದ್ಧಿಯು ಯುವ ಜನರ ಕೌಶಲ್ಯದ ಮಟ್ಟವನ್ನು ಆಧರಿಸಿದೆ. ಕರ್ನಾಟಕ ಸರ್ಕಾರವು ಯುವಕರ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ 2 ವರ್ಷಗಳಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯದ 150 ಸರಕಾರಿ ಐ.ಟಿ ಐ ಗಳನ್ನು ಉನ್ನತೀಕರಿಸಿ Industrial Automation, Robotics, Industry 4.0 ನಂತಹ ಅತ್ಯಾಧುನಿಕ ಲ್ಯಾಬ್ ಗಳನ್ನು ಸ್ಥಾಪಿಸಲು 4,636.50 ಕೋಟಿ ರೂಪಾಯಿಗಳ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಉನ್ನತೀಕರಣದ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಇದೇ ಸೆಪ್ಟೆಂಬರ್ ನಲ್ಲಿ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.


ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆ ಇತರೆ ರಾಜ್ಯಗಳಿಂದ ಮರಳಿದ ವಲಸೆ ಕಾರ್ಮಿಕರ ತರಬೇತಿ ಮತ್ತು ಕೆಲಸ ದೊರಕಿಸಲು ಸರ್ಕಾರವು ಕೌಶಲ್‍ ಕರ್-ಡಾಟ್-ಕಾo ವೆಬ್ ಪೋರ್ಟಲ್ ಅಭಿವೃದ್ಧಿ ಪಡಿಸಿದೆ. ಕೈಗಾರಿಕೆಗಳಲ್ಲಿರುವ ಉದ್ಯೋಗ ಅವಕಾಶಗಳಿಗೆ ಅನುಸಾರವಾಗಿ ಕುಶಲ ಯುವಕರಿಗೆ ಉದ್ಯೋಗ ಒದಗಿಸಲು Skill Connect ವೆಬಿ ಪೋರ್ಟಲ್‍ ಮೂಲಕ ವರ್ಚುಯಲ್ ಉದ್ಯೋಗ ಮೇಳಗಳನ್ನು ನಡೆಸಲಾಗುತ್ತಿದೆ. ವಿದೇಶದಲ್ಲಿರುವ ನುರಿತ ಮಾನವ ಸಂಪನ್ಮೂಲದ ಬೇಡಿಕೆಯನ್ನು ಪೂರೈಸಿ ರಾಜ್ಯದ ಯುವಕರು ವಿದೇಶಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ನೆರವಾಗಲು ‘ಅಂತರರಾಷ್ಟ್ರೀಯ ವಲಸೆ ಕೇಂದ್ರ ವನ್ನು ಸ್ಥಾಪಿಸಿದೆ ಎಂದರು.

- Advertisement -


ಈಗಾಗಲೇ ಬ್ರಿಟನ್ನಿನ National Health Services ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಕರ್ನಾಟಕದಿಂದ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸುವ ಕಾರ್ಯಪ್ರಗತಿಯಲ್ಲಿದೆ. ಸರ್ಕಾರಿ ಸಂಸ್ಥೆಗಳ ಮೂಲಕ ಉನ್ನತ ಮಟ್ಟದ ತಾಂತ್ರಿಕ ಕೌಶಲ್ಯವನ್ನು ನೀಡಿ ರಾಜ್ಯದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಕೌಶಲ್ಯಯುಕ್ತ ಮಾನವ ಸಂಪನ್ಮೂಲವನ್ನು ಒದಗಿಸಲು ಯುವಕರಿಗೆ ತಾಂತ್ರಿಕ ಕೌಶಲ್ಯ ತರಬೇತಿ ಗಾಗಿ ಪ್ರಸಕ್ತ ಸಾಲಿನಲ್ಲಿ 4 ಹೊಸ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ಡಿಪ್ಲೊಮಾ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿವರಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಾಜ್ಯದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಗ್ರಾಮ ಮಟ್ಟದ ಒಕ್ಕೂಟದ ಮುಖಾಂತರ ಸಮುದಾಯ ಹೂಡಿಕೆ ನಿಧಿಯಾಗಿ 400 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು, 2021-22ನೇ ಸಾಲಿನಲ್ಲಿ ಈಗಾಗಲೇ 17,121 ಸ್ವ-ಸಹಾಯ ಗುಂಪುಗಳಿಗೆ ರೂ. 149.03 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.

ಕಳೆದ ಸಾಲಿನಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಒಂದು ಲಕ್ಷದ ಹತ್ತು ಸಾವಿರ ಬೀದಿ-ಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿಗಳ ‘ಸ್ವ-ನಿಧಿ ಯೋಜನೆಯಡಿಯಲ್ಲಿ 10,000 ರೂ.ಗಳ ಹೂಡಿಕೆ ಬಂಡವಾಳವನ್ನು ಸಾಲದ ರೂಪದಲ್ಲಿ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 20,000 ರೂ.ಗಳನ್ನು ಹೆಚ್ಚುವರಿ ಹೂಡಿಕೆ ಬಂಡವಾಳವನ್ನು ಸಾಲದ ರೂಪದಲ್ಲಿ ವಿತರಿಸಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ ಹತ್ತು ಮಿಲಿಯನ್ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಕರ್ನಾಟಕ ಕೌಶಲ್ಯ ಮತ್ತು ಉದ್ಯಮಶೀಲತಾ ಕಾರ್ಯಪಡೆಯನ್ನು ರಚಿಸಿದೆ. ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಕ್ರಿಯ ಮುಂದಾಳತ್ವದಲ್ಲಿ ರಾಜ್ಯದ ಯುವಕರಿಗೆ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಗಳನ್ನು ಇಟ್ಟಿದೆ. ‘ಸ್ಕಿಲ್ ಇಂಡಿಯಾ ಮಿಷನ್’ ಹಾಗೂ ‘ಆತ್ಮನಿರ್ಭರ್ ಭಾರತ ಯೋಜನೆ’ಗಳು ಯುವಜನರ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಗಮನಾರ್ಹ ಸಾಧನೆ ಮಾಡಲಿದೆ ಎಂಬ ಆಶಯವನ್ನುಮುಖ್ಯಮಂತ್ರಿ ಗಳು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.


ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲಾಭಿವೃದ್ಧಿ ಸಚಿವರಾದ ಡಾ: ಅಶ್ವತ್ಥ್ ನಾರಾಯಣ, ಇಲಾಖೆಯ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಹಾಗೂ ಮತ್ತಿತರರು ಹಾಜರಿದ್ದರು.

Join Whatsapp