ರಾಯ್‌ಗಢ: ಕಬಡ್ಡಿ ಪಂದ್ಯಾಟದ ವೇಳೆ ತೀವ್ರವಾಗಿ ಗಾಯಗೊಂಡಿದ್ದ 32 ವರ್ಷದ ಆಟಗಾರನೊಬ್ಬ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟ ಘಟನೆ ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯಲ್ಲಿ ನಡೆದಿದೆ.
ರಾಜ್ಯ ಸರ್ಕಾರದ ನೂತನ ಕ್ರೀಡಾ ಯೋಜನೆ ʻಛತ್ತೀಸ್‌ಗಢಿಯ ಒಲಿಂಪಿಕ್ಸ್ʼನ ಅಡಿಯಲ್ಲಿ ಘರ್ಘೋಡಾ ಪೊಲೀಸ್ ಠಾಣೆ ವ್ಯಾಪ್ತಿಯ ಭಾಲುಮಾರ್ ಪ್ರದೇಶದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಕೂಟದಲ್ಲಿ ಈ ದುರಂತ ಸಂಭವಿಸಿದೆ
ತಂಡರಾಮ್ ಮಾಲಕರ್ ಎಂಬಾತನೇ ಮೃತ ದುರ್ದೈವಿ. ಎದುರಾಳಿ ತಂಡದ ಅಂಗಣದಲ್ಲಿ ರೈಡ್ ಮಾಡುತ್ತಿದ್ದಾಗ ಆಟಗಾರರು ಕ್ಯಾಚ್ ಮಾಡಿದ್ದಾರೆ. ಈ ವೇಳೆ ಮಾಲಕರ್ ಅವರ ತಲೆ ಜೋರಾಗಿ ನೆಲಕ್ಕೆ ಬಡಿದ ಕಾರಣ ಪ್ರಜ್ಞಾಹೀನರಾಗಿದ್ದರು. ಟೂರ್ನಿ ಆಯೋಜಿಸಲಾಗಿದ್ದ ಸ್ಥಳದಲ್ಲಿ ಯಾವುದೇ ಪ್ರಾಥಮಿಕ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿರಲಿಲ್ಲ. ಮತ್ತೊಂದೆಡೆ ಕೆಟ್ಟ ರಸ್ತೆ ಮತ್ತು ಟ್ರಾಫಿಕ್ ಕಾರಣದಿಂದಾಗಿ 4 ಕಿಲೋ ದೂರದಲ್ಲಿದ್ದ ಆಸ್ಪತ್ರೆಯನ್ನು ತಲುಪಲು ಬರೋಬ್ಬರಿ 4 ಗಂಟೆ ಸಮಯ ತೆಗೆದುಕೊಳ್ಳಲಾಗಿದೆ. ಹೀಗಾಗಿ ಗಂಭೀರ ಗಾಯಗೊಂಡಿದ್ದ ತಂಡರಾಮ್, ರಾಯ್‌ಗಢ್ ಜಿಲ್ಲಾಸ್ಪತ್ರೆ ತಲುಪುವ ವೇಳೆ ಮೃತಪಟ್ಟಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ. ಆದರೆ ಮೃತ ಆಟಗಾರನ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಮತ್ತು ಸ್ಥಳದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.