ಆದಿಪುರುಷ್ ಸಿನಿಮಾ ಬಗ್ಗೆ ಚತ್ತೀಸ್​ಘಡ ಸಿಎಂ ಆಕ್ಷೇಪ, ಜನರು ಬಯಸಿದರೆ ಬ್ಯಾನ್!

Prasthutha|

ಹೊಸದಿಲ್ಲಿ : ಆದಿಪುರುಷ್ ಸಿನಿಮಾ ಬಿಡುಗಡೆ ಆದ ಬೆನ್ನಲ್ಲೆ ಹಲವರು ಸಿನಿಮಾದಲ್ಲಿ ಬಳಸಲಾಗಿರುವ ವಿಎಫ್​ಎಕ್ಸ್ ಗುಣಮಟ್ಟವನ್ನು ಟೀಕಿಸಿದ್ದಾರೆ. ಶ್ರೀರಾಮ, ರಾವಣ ಇನ್ನಿತರೆ ಪಾತ್ರಗಳ ವಸ್ತ್ರ ವಿನ್ಯಾಸ, ಪಾತ್ರಗಳ ಮೂಲ ವ್ಯಕ್ತಿತ್ವವನ್ನು ತಿರುಚಿರುವ ರೀತಿಯ ಬಗ್ಗೆ ಆಕ್ಷೇಪಿಸಿದ್ದಾರೆ. ನಿನ್ನೆಯಷ್ಟೆ ಹಿಂದೂ ಸೇನಾ ಸಂಘಟನೆಯು ದೆಹಲಿ ಹೈಕೋರ್ಟ್​ಗೆ ಆದಿಪುರುಷ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಈ ಸಿನಿಮಾವು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದಿದೆ. ಇದರ ಬೆನ್ನಲ್ಲೆ ಇದೀಗ ಚತ್ತೀಸ್​ಘಡ ಸಿಎಂ ಸಹ ಸಿನಿಮಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ರಾಜ್ಯದಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲು ಸಿದ್ಧ ಎಂದಿದ್ದಾರೆ.

- Advertisement -

ಆದಿಪುರುಷ್ ಸಿನಿಮಾ ಕುರಿತಂತೆ ಮಾತನಾಡಿರುವ ಚತ್ತೀಸ್​ಘಡ ಸಿಎಂ ಭೂಪೇಶ್ ಭಗೇಲ, ”ನಮ್ಮ ಆರಾಧ್ಯ ದೈವಗಳ ಚಿತ್ರಣವನ್ನೇ ಬದಲು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಶ್ರೀರಾಮ ಹಾಗೂ ಹನುಮಂತ ಅವರ ಮೂಲ ಭಾವ ಭಕ್ತಿ, ಸೌಮ್ಯತೆ ಆದರೆ ಶ್ರೀರಾಮರನ್ನು ಯೋಧನನ್ನಾಗಿ, ಹನುಮಂತನನ್ನು ಆಂಗ್ರಿ ಬರ್ಡ್​ ರೀತಿಯಲ್ಲಿ ಆದಿಪುರುಷ್ ಸಿನಿಮಾದಲ್ಲಿ ತೋರಿಸಲಾಗಿದೆ” ಎಂದಿರುವ ಸಿಎಂ, ಸಿನಿಮಾದಲ್ಲಿ ಬಳಸಲಾಗಿರುವ ಭಾಷೆಯ ಬಗ್ಗೆಯೂ ಆಕ್ಷೇಪಣೆ ಎತ್ತಿದ್ದಾರೆ.

“ಹನುಮಂತನ ಪಾತ್ರದ ಮೂಲಕ ಹೇಳಿಸಿರುವ ಸಂಭಾಷಣೆಗಳು ಗೌರವಪೂರ್ವಕವಾಗಿಲ್ಲ. ಅಲ್ಲದೆ ಅರಬಿ, ಪಾರ್ಸಿ ಶಬ್ದಗಳ ಬಳಕೆಯನ್ನೂ ಸಹ ಕೆಲವು ಸಂಭಾಷಣೆಗಳಲ್ಲಿ ಮಾಡಲಾಗಿದೆ. ಈಗಿನ ಕಾಲದ ಮಕ್ಕಳು ಈ ಸಿನಿಮಾ ನೋಡಿದರೆ ರಾಮಾಯಣದ ಕುರಿತಂತೆ ಅವರಿಗೆ ಯಾವ ರೀತಿಯ ಅಭಿಪ್ರಾಯ ಮೂಡಬಹುದು” ಎಂದು ಸಿಎಂ ಭೂಪೇಶ್ ಭಗೇಲ ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

ರಾಜೀವ್ ಗಾಂಧಿ ಅವರು ರಮಾನಂದ ಸಾಗರ್ ಅವರ ಮೂಲಕ ರಾಮಾಯಣ ಮಾಡಿಸಿದ್ದರು. ಅವರು ಅದ್ಭುತವಾಗಿ ರಾಮಾಯಣವನ್ನು ಧಾರಾವಾಹಿಯಾಗಿ ಪ್ರಸ್ತುತ ಪಡಿಸಿದ್ದರು. ಧಾರಾವಾಹಿ ಪ್ರಸಾರ ಆಗುವ ವೇಳೆಗೆ ಭಾರತದ ರಸ್ತೆಗಳು ಖಾಲಿ ಆಗಿಬಿಡುತ್ತಿದ್ದವು ಎಂದಿರುವ ಸಿಎಂ, ಮಾತು ಮಾತಿಗೆ ಸಿನಿಮಾಗಳನ್ನು ಬ್ಯಾನ್ ಮಾಡುತ್ತಿದ್ದ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತಿದ್ದ ಸಂಘಟನೆಗಳೆಲ್ಲ ಈಗ ಎಲ್ಲಿ ಅಡಗಿವೆ ಎಂದು ಅವರು ಪ್ರಶ್ನಿಸಿದ್ದಾರೆ.

ಚತ್ತೀಸ್​ಘಡದಲ್ಲಿ ಆದಿಪುರುಷ್ ಸಿನಿಮಾ ಬ್ಯಾನ್ ಆಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಭೂಪೇಶ್ ಭಗೇಲ, ಜನ ಈಗ ಸಿನಿಮಾ ನೋಡುತ್ತಿದ್ದಾರೆ. ಒಂದೊಮ್ಮೆ ಜನರಿಂದ ಬೇಡಿಕೆ ಬಂದರೆ ಖಂಡಿತ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Join Whatsapp