ಚಾರ್ದಾಮ್ ಯಾತ್ರೆ: ಹೃದಯಾಘಾತದಿಂದ ಇಲ್ಲಿಯವರೆಗೆ 46 ಯಾತ್ರಿಕರು ಸಾವು; 48ಕ್ಕೇರಿದ ಸಾವಿನ ಸಂಖ್ಯೆ

Prasthutha|

ಡೆಹ್ರಾಡೂನ್: ಮೇ 3ರಂದು ಚಾರ್ದಾಮ್ ಯಾತ್ರೆ ಆರಂಭವಾಗಿದ್ದು, ಈ ಯಾತ್ರೆ ಆರಂಭವಾದಾಗಿನಿಂದ ಕನಿಷ್ಠ 48 ಯಾತ್ರಾರ್ಥಿಗಳು ದೇಗುಲಗಳಿಗೆ ಹೋಗುವ ದಾರಿ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ 46 ಜನರು ಹೃದಯಾಘಾತ ಮತ್ತು ಇದಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಅಧಿಕ ರಕ್ತದೊತ್ತಡ, ಹೃದಯಾಘಾತ, ಪರ್ವತ ಸಂಬಂಧಿ ಕಾಯಿಲೆಗಳು ಚಾರ್ದಾಮ್ ಯಾತ್ರಾರ್ಥಿಗಳ ಸಾವಿಗೆ ಪ್ರಮುಖ ಕಾರಣವೆಂಬುದು ಅಧಿಕಾರಿಗಳ ಅಭಿಪ್ರಾಯ.

ಈ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಚಾರ್ದಾಮ್ ಯಾತ್ರ್ಯ ಆಫ್ ಲೈನ್ ನೋಂದಣಿ ಅವಧಿಯನ್ನು ಒಂದು ತಿಂಗಳಿನಿಂದ ಒಂದು ವಾರಕ್ಕೆ ಕಡಿತಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರಯಾಣದ ಮಾರ್ಗಗಳಲ್ಲಿ 20 ಸ್ಥಳಗಳಲ್ಲಿ ನೋಂದಣಿ ಮಾಡಲಾಗುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ತಿಳಿಸಿದ್ದಾರೆ.

- Advertisement -

ಸದ್ಯ ಅಲ್ಲಿ ಜನಸಂದಣಿ ಇರುವ ಕಾರಣ ಹಿಮಾಲಯ ದೇವಾಲಯಗಳಿಗೆ ಪ್ರವೇಶಿಸುವ ಮೊದಲು ತಮ್ಮನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಚಾರ್ದಾಮ್ ಯಾತ್ರಾರ್ಥಿಕರಿಗೆ ಉತ್ತರಾಖಂಡ ಸರ್ಕಾರ ಸಲಹೆ ನೀಡಿತ್ತು.

ಋಷಿಕೇಶದ ಹೊರತಾಗಿ ಪ್ರಯಾಣ ಮಾರ್ಗದ ವಿವಿಧ ಕಡೆಗಳಲ್ಲಿ ಯಾತ್ರಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಉತ್ತರಾಖಂಡ ಆರೋಗ್ಯ ಮಹಾ ನಿರ್ದೇಶಕಿ ಡಾ. ಶೈಲಜಾ ಭಟ್ ತಿಳಿಸಿದ್ದಾರೆ.

ಹೆಚ್ಚುತ್ತಿರುವ ಸಾವಿನ ಹಿನ್ನೆಲೆಯಲ್ಲಿ ತಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ತೀರ್ಥಯಾತ್ರೆಗೆ ತೆರಳುವಂತೆ ಭಕ್ತರಲ್ಲಿ ಮನವಿ ಮಾಡಿದ್ದಾರೆ. ಚಾರ್ದಾಮ್ ಯಾತ್ರಾ ಸ್ಥಳಗಳು ಸೀಮಿತ ಸಂಪನ್ಮೂಲಗಳನ್ನು ಹೊಂದಿರುವುದರಿಂದ ಆಹಾರ, ನೀರಿನ ವ್ಯವಸ್ಥೆಗಳಿಲ್ಲದಿದ್ದರೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಬೇಡಿ ಎಂದು ಮುಖ್ಯಮಂತ್ರಿ ಪುಷ್ಕರ್ ಧಾಮಿ ಸೂಚಿಸಿದ್ದಾರೆ.

Join Whatsapp