ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಮತ್ತು ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡೊ ನಡುವೆ ಫುಟ್ಬಾಲ್ ಜಗತ್ತಿನಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಜಿದ್ದಾಜಿದ್ದಿನಲ್ಲಿ ಮತ್ತೊಮ್ಮೆ ಮೆಸ್ಸಿ ಕೈ ಮೇಲಾಗಿದೆ.
ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಗುರುವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ ಪಿಎಸ್ ಜಿ ತಂಡದ ಪರ ಆಡುತ್ತಿರುವ ಮೆಸ್ಸಿ ಮತ್ತೊಂದು ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.
ಮಕ್ಕಾಬಿ ಹೈಫಾ ವಿರುದ್ಧದ ಪಂದ್ಯದಲ್ಲಿ ಪಿಎಸ್ ಜಿ ತಂಡ 3-1 ಅಂತರದಿಂದ ಗೆಲುವು ಸಾಧಿಸಿತ್ತು. ಪಂದ್ಯದ 24ನೇ ನಿಮಿಷದಲ್ಲಿ ತರೋನ್ ಚೆರಿ ಗಳಿಸಿದ ಗೋಲಿನ ಮೂಲಕ ಹೈಫಾ ತಂಡ ಮುನ್ನಡೆ ಸಾಧಿಸಿತ್ತು.
ಆದರೆ 8 ನಿಮಿಷ ಕಳೆಯುವಷ್ಟರಲ್ಲೇ ಎಂಬಾಪೆ ನೀಡಿದ ಪಾಸ್ ಸಹಾಯದಿಂದ ಮೆಸ್ಸಿ ದಾಖಲೆಯ ಗೋಲು ಬಾರಿಸಿದರು. ಆ ಮೂಲಕ,
ಚಾಂಪಿಯನ್ಸ್ ಲೀಗ್ ಟೂರ್ನಿಯ ಇತಿಹಾಸದಲ್ಲಿ, ಒಟ್ಟಾರೆಯಾಗಿ 39ನೇ ಕ್ಲಬ್ ವಿರುದ್ಧ ಗೋಲು ದಾಖಲಿಸಿದ ಮೊತ್ತ ಮೊದಲ ಆಟಗಾರ ಎಂಬ ಕೀರ್ತಿಯನ್ನು ಮೆಸ್ಸಿ ತಮ್ಮದಾಗಿಸಿಕೊಂಡರು.
ಇದಕ್ಕೂ ಮೊದಲು 38 ಕ್ಲಬ್‌ಗಳ ಎದುರು ಗೋಲು ದಾಖಲಿಸಿದ ದಾಖಲೆ ಮೆಸ್ಸಿ-ಮತ್ತು ರೊನಾಲ್ಡೊ ಹೆಸರಿನಲ್ಲಿತ್ತು.
ಸತತವಾಗಿ ಚಾಂಪಿಯನ್ಸ್ ಲೀಗ್‌ನ 18ನೇ ಆವೃತ್ತಿಯಲ್ಲೂ ಗೋಲು ದಾಖಲಿಸಿದ ಮೊದಲ ಆಟಗಾರ ಎಂಬ ದಾಖಲೆಯೂ ಇದೇ ಸಂದರ್ಭದಲ್ಲಿ ಮೆಸ್ಸಿ ಪಾಲಾಗಿದೆ
ಇದರ ಜೊತೆಗೆ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ತಮ್ಮ ಗೋಲು ಗಳಿಕೆಯನ್ನು ಮೆಸ್ಸಿ 126 ಕ್ಕೆ ಏರಿಸಿಕೊಂಡರು. ಮತ್ತೊಂದೆಡೆ ಯುಸಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಗೋಲು ಬಾರಿಸಿದ ದಾಖಲೆ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಿನಲ್ಲಿದೆ. 5 ಬಾರಿ ಚಾಂಪಿಯನ್ಸ್ ಲೀಗ್ ಟೂರ್ನಿಯ ಚಾಂಪಿಯನ್ ತಂಡದ ಭಾಗವಾಗಿರುವ ರೊನಾಲ್ಡೊ ಒಟ್ಟು 140 ಗೋಲು ದಾಖಲಿಸಿದ್ದಾರೆ.
ಕಳೆದ ಆವೃತ್ತಿಯ ಇಂಗ್ಲಿಷ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೊನಾಲ್ಡೊ ಪ್ರತಿನಿಧಿಸುವ ಮ್ಯಾಂಚೆಸ್ಟರ್ ಯುನೈಟೆಡ್ ತಂಡ, ಅಂಕ ಪಟ್ಟಿಯಲ್ಲಿ 6 ನೇ ಸ್ಥಾನಕ್ಕೆ ಕುಸಿದಿತ್ತು. ಹಿನ್ನಲೆಯಲ್ಲಿ ಈ ಬಾರಿಯ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಆಡುವ ಅವಕಾಶದಿಂದ ರೊನಾಲ್ಡೊ ವಂಚಿತರಾಗಿದ್ದಾರೆ.
ಬೇರೆ ಕ್ಲಬ್ ಸೇರ್ಪಡೆಯಾಗಲು ಸಾಕಷ್ಟು ಪ್ರಯತ್ನ ನಡೆಸಿದರಾದರೂ ಫಲ ಕೊಟ್ಟಿರಲಿಲ್ಲ.