ಬೆಂಗಳೂರು: ಕೊರೋನಾ 2ನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಂಗ್ರಹದ ಅಸಮರ್ಪಕ ನಿರ್ವಹಣೆಯಿಂದ ಸಂಭವಿಸಿದ ದುರಂತಕ್ಕೆ ಇಂದು (ಮೇ 2) 1 ವರ್ಷ ತುಂಬಿದೆ.
ದುರಂತ ಸಂಬಂಧ ಯಾರ ಮೇಲೂ ಕ್ರಮಕೈಗೊಂಡಿಲ್ಲ. ದುರಂತ ಸಂಭವಿಸಿ ಒಂದು ವರ್ಷವಾದರೂ ನ್ಯಾಯಾಂಗ ತನಿಖಾ ವರದಿ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತಿರುವ ಸಂತ್ರಸ್ತ ಕುಟುಂಬಗಳು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿವೆ.
ಆಕ್ಸಿಜನ್ ಕೊರತೆಯಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ 36 ಕೊರೋನಾ ರೋಗಿಗಳು ಮೃತಪಟ್ಟಿದ್ದರು. ಮೃತ 36 ಮಂದಿ ಪೈಕಿ 24 ರೋಗಿಗಳ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿದೆ. ಆದರೆ ಉಳಿದ 12 ಕುಟುಂಬಗಳಿಗೆ ಈವರೆಗೆ ನಯಾಪೈಸೆ ಪರಿಹಾರವೂ ಸಿಕ್ಕಿಲ್ಲ. ಆಕ್ಸಿಜನ್ ದುರಂತಕ್ಕೆ ಅಂದಿನ ಜಿಲ್ಲಾಧಿಕಾರಿಯ ನಿರ್ಲಕ್ಷ್ಯವೇ ಕಾರಣ ಎಂದು ನ್ಯಾಯಮೂರ್ತಿ ವೇಣುಗೋಪಾಲ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಹೇಳಿತ್ತು. ಆದರೆ ರಾಜ್ಯ ಸರ್ಕಾರ ಮಾತ್ರ ದುರಂತಕ್ಕೆ ಯಾರನ್ನೂ ಹೊಣೆ ಮಾಡಲಿಲ್ಲ.
ಹೈಕೋರ್ಟ್ ಸೂಚನೆಯ ಬಳಿಕ 24 ಮಂದಿಯ ಕುಟುಂಬಗಳಿಗೆ ತಲಾ 2 ಲಕ್ಷ ಹಾಗೂ ಆಗಸ್ಟ್ ಎರಡನೇ ವಾರದಲ್ಲಿ 13 ಮಂದಿಯ ಕುಟುಂಬಗಳಿಗೆ ಹೆಚ್ಚುವರಿಯಾಗಿ ತಲಾ 3 ಲಕ್ಷವನ್ನು ತಾತ್ಕಾಲಿಕ ಪರಿಹಾರವಾಗಿ ನೀಡಲಾಯಿತು. ದುರಂತದಲ್ಲಿ ಕೋವಿಡ್ ರೋಗಿಗಳು ಮಾತ್ರವಲ್ಲದೇ, ಕೋವಿಡ್ ಲಕ್ಷಣ ಇದ್ದರೂ ಸೋಂಕು ದೃಢಪಡದ ಹಲವು ಮೃತಪಟ್ಟಿದ್ದರು. ಅವರ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಿಸಲಿಲ್ಲ. ದುರಂತದಲ್ಲಿ ಮೃತಪಟ್ಟ ಎಲ್ಲ 36 ಕುಟುಂಬಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರತಿನಿಧಿಗಳು ಭೇಟಿ ನೀಡಿ ನೀಡಿ ತಲಾ 1 ಲಕ್ಷ ಪರಿಹಾರ ನೀಡಿತ್ತು. ಈ ಸಂಬಂಧವಾಗಿ ಎಸ್ ಡಿಪಿಐ ನಿರಂತರ ಹೋರಾಟ ಮಾಡುತ್ತಿದೆ.