ಚಕ್ರತೀರ್ಥ ಪರಿಷ್ಕರಣೆಯ ಪುಸ್ತಕ ಮಕ್ಕಳಿಗೆ ಹಾಲಿನ ಜೊತೆ ವಿಷ ಬೆರೆಸಿಕೊಡುವಂತಿದೆ: ಪ್ರೊ. ಎಸ್. ಜಾಫೆಟ್

Prasthutha|

►► ಕಲ್ಪಿತ ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ಬೇಕಿರುವ ಭಾವನಾತ್ಮಕ ಮೌಢ್ಯ ಬಿತ್ತಲಾಗುತ್ತಿದೆ

- Advertisement -


ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕರ್ನಾಟಕದ ಉದ್ದಗಲಕ್ಕೂ ಶಾಲಾ ಪಠ್ಯ ಮರು ಪರಿಷ್ಕರಣಾ ಸಮಿತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಹಿಂದಿನ ಸರ್ಕಾರ ಸಿದ್ಧ ಪಡಿಸಿದ್ದ ಶಾಲಾ ಪಠ್ಯ ಪುಸ್ತಕಗಳಲ್ಲಿ ಎಡ ಪಂಥೀಯ ಧೋರಣೆಗಳು ಅಡಕಗೊಂಡಿವೆ ಎಂದು ಆರೋಪಿಸಿ ಕನ್ನಡ ವಿವೇಕಕ್ಕೆ ಅನ್ವರ್ಥವಾಗಿದ್ದ ಪಿ. ಲಂಕೇಶ್, ಎಲ್. ಬಸವರಾಜು ಮುಂತಾದ ಮೇರು ವಿದ್ವಾಂಸರ ಬರಹಗಳನ್ನು ಪಠ್ಯಗಳಿಂದ ಕಿತ್ತುಹಾಕಲಾಗಿದೆ. ಸಾವಿರಾರು ವರ್ಷಗಳಲ್ಲಿ ಕನ್ನಡ ಭಾಷೆಯು ಗಳಿಸಿಕೊಂಡಿರುವ ವಿವೇಕವನ್ನು ಕ್ಷಣಮಾತ್ರದಲ್ಲಿ ವಿರೂಪಗೊಳಿಸುವ ಕೆಲಸವನ್ನು ಮರುಪರಿಷ್ಕರಣೆಯ ಹೆಸರಿನಲ್ಲಿ ಮಾಡಲಾಗಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ವಿಶ್ರಾಂತ ಸ್ಥಾಪಕ ಕುಲಪತಿ ಪ್ರೊ.ಜಾಫೆಟ್ ಎಸ್. ಆರೋಪಿಸಿದ್ದಾರೆ.

ಭಾರತವು ‘ಜಾಗತಿಕ ಗುರು’ ಎಂಬ ಭ್ರಮೆಯಲ್ಲಿ ಸಿಕ್ಕಿಕೊಂಡಿರುವ ಹಾಗೂ ‘ಭೂತಕಾಲವೇ ಶ್ರೇಷ್ಠ ವಾಗಿತ್ತು’ ಎಂದು ಭೌದ್ಧಿಕವಾಗಿ ಸಮಾಜವನ್ನು ನಂಬಿಸಲು ಹೊರಟಿರುವ ಸದರಿ ಸಮಿತಿಯು ಭಾರತದಲ್ಲಿ ಇದ್ದ ತಾರತಮ್ಯವನ್ನು ನೈಜ ಸ್ಥಿತಿ ಎಂಬಂತೆ ಬಿಂಬಿಸುವ ಹುನ್ನಾರವನ್ನು ಮಾಡಿದೆ. ಅದಕ್ಕೆ ಪೂರಕವಾಗುವಂತಹ ಹುಸಿ ರಾಷ್ಟ್ರಭಕ್ತಿ ಯ ಮನೋರೋಗವನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಈ ನೆಲದಲ್ಲಿ ಬುದ್ಧ ಬಸವ ಗಾಂಧಿ ನಾರಾಯಣ ಗುರು ಅಂಬೇಡ್ಕರ್ ಸಾವಿತ್ರಿ ಭಾಯಿ ಫುಲೆ ಅವರಂತಹ ದಲಿತೋದ್ಧಾರಕರನ್ನು ಎಳೆಯರಿಂದ ನಿಧಾನ ದೂರ ಮಾಡುವ ಯೋಜನೆ ನಿಚ್ಚಳವಾಗಿ ಈ ಪರಿಷ್ಕರಣೆಯ ಹಿಂದೆ ಕೆಲಸ ಮಾಡಿದೆ ಎಂದು ಟೀಕಿಸಿದರು.

- Advertisement -


ಪಠ್ಯಕ್ರಮ ಮತ್ತು ಪಠ್ಯಗಳನ್ನು ವಿದ್ಯಾರ್ಥಿಗಳ ವಯೋಮಾನವನ್ನು ಆಧರಿಸಿ ರೂಪುಗೊಳಿಸಬೇಕು. ಪ್ರಾಥಮಿಕ ಹಂತದಲ್ಲಿ ಜೀವನ ಮೌಲ್ಯಗಳು ಹಾಗೂ ಪ್ರೌಢ ಶಿಕ್ಷಣದಲ್ಲಿ ವಿಷಯವಾರು ಮಾಹಿತಿಗಳು ಮಕ್ಕಳಿಗೆ ಲಭ್ಯವಾಗುವಂತಿರಬೇಕು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಆದರೆ ಚಕ್ರತೀರ್ಥ ಅವರ ಮೂಲಕ ಪರಿಷ್ಕರಣ ಸಮಿತಿಯು ಕಲ್ಪಿತ ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ಬೇಕಿರುವ ಭಾವನಾತ್ಮಕ ಮೌಢ್ಯವನ್ನು ಮಕ್ಕಳಿಗೆ ಹಾಲಿನ ಜೊತೆ ವಿಷ ಬೆರೆಸಿಕೊಡುವಂತೆ ವಿನ್ಯಾಸಗೊಳಿಸಿದೆ. ಬಸವಣ್ಣನವರನ್ನು ಹಿಂದೂ ಧರ್ಮದ ಸುಧಾರಕರೆಂದು ಪರಿಚಯಿಸುವ ಮೂಲಕ ವೈದಿಕ ವಿರೋಧಿಯಾದ ಸತ್ಯವನ್ನು ಮರೆಮಾಚಲಾಗಿದೆ. ಚಕ್ರತೀರ್ಥ ಅವರು ತೆಗೆದು ಹಾಕಿರುವ ಪಠ್ಯಗಳು ಕರ್ನಾಟಕದ ಬಹುಸ್ತರ ಸಾಮಾಜಿಕ ಬದುಕಿನ ವೈವಿಧ್ಯೆತೆಯನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಗುರಿಯನ್ನು ಹೊಂದಿದ್ದವು.

ಈ ಸಮಿತಿಯು ಎಸಗಿರುವ ಅಪಾಯವನ್ನು ಕನ್ನಡದ ಪ್ರಜ್ಞಾವಂಥ ಜನರು ತೀವ್ರವಾಗಿ ಪ್ರತಿಭಟಿಸುತ್ತಿರುವ ಘಟನೆಗಳು ದಿನವು ವರದಿಯಾಗುತ್ತಿವೆ. ಆದರೆ ಬಿ.ಜೆ.ಪಿ. ಸರ್ಕಾರ ಪರಿಷ್ಕರಣ ಸಮಿತಿಯ ಅವೈಜ್ಞಾನಿಕ ನಿಲುವಿಗೆ ಬೆಂಬಲವಾಗಿ ನಿಂತಿರುವುದು ಮಾತ್ರ ವಿಷಾದದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಸಮಿತಿಯನ್ನು ಮತ್ತು ಅದರ ಶಿಫಾರಸ್ಸುಗಳನ್ನು ತಕ್ಷಣ ಕೈಬಿಡಲು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಪಠ್ಯ ಪುಸ್ತಕಗಳನ್ನು ಜ್ಞಾನ ಮತ್ತು ಸತ್ಯದ ಸಂಗತಿಗಳಿಗೆ ಮಾತ್ರ ಮೀಸಲಾಗಿರಿಸಬೇಕು ಎಂದು ಅವರು ಒತ್ತಾಯಿಸಿದರು.

Join Whatsapp