ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪದವಿ ಕಲಿಕಾ ವ್ಯವಸ್ಥೆ ಜಾರಿಗೊಳಿಸುವ ತೀರ್ಮಾನವನ್ನು ಕುಲಪತಿಗಳು ಕೈಗೊಂಡಿದ್ದು ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿ ಇದರ ವಿರುಧ್ದ ಮಂಗಳೂರು ಯುನಿವರ್ಸಿಟಿ ಮಾರ್ಚ್ ನಡೆಸಲು ತೀರ್ಮಾನಿಸಲಾಗಿದೆಯೆಂದು ಕ್ಯಾಂಪಸ್ ಫ್ರಂಟ್ ನಾಯಕರು ಪತ್ರಿಕಾಗೋಷ್ಠಿಯ ಮುಖಾಂತರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡರಾದ ರಿಯಾಝ್ ಅಂಕತ್ತಡ್ಕ ಇಡೀ ಶಿಕ್ಷಣ ಕ್ಷೇತ್ರವನ್ನೇ ಬದಲಾಯಿಸುವ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಲೋಕಸಭೆಯಲ್ಲಿ ಹಾಗೂ ವಿಧಾನಸಭೆಯಲ್ಲಿ ಚರ್ಚೆಯಾಗದೆ ತರಾತುರಿಯಲ್ಲಿ ಹಿಂಬದಿ ಬಾಗಿಲಿನ ಮುಖಾಂತರ ಜಾರಿಗೆ ತರಲಾಗಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾದ ಸಂವಿಧಾನ ವಿರೋಧಿ ನೀತಿಯಾಗಿದ್ದು ಹಾಗೂ ಖಾಸಗೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮತ್ತು ಮಧ್ಯಮ ಯುಗದ ಇತಿಹಾಸಗಳನ್ನು ಮರೆಮಾಚಿ, ಪ್ರಾಚೀನ ಸಂಸ್ಕೃತಿಯನ್ನು ಪ್ರತಿಬಿಂಬಿಸಿ ಕೇಸರಿಕರಣಕ್ಕೆ ಒತ್ತು ನೀಡುತ್ತಿರುವ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ.
ಇದೀಗ ವಿಶ್ವವಿದ್ಯಾನಿಲಯದಲ್ಲಿ ಪದವಿ ಕಲಿಕಾ ವ್ಯವಸ್ಥೆ ಈ ನೀತಿಯಡಿ ಜಾರಿ ಮಾಡಲು ಹೊರಟಿದ್ದು ಇದರಿಂದಾಗಿ ನಿರುದ್ಯೋಗದ ಪ್ರಮಾಣ ಇನ್ನೂ ಹೆಚ್ಚಾಗಲಿದೆ, ಒಂದು ವರ್ಷ ಪದವಿ ಕಲಿತು ಪ್ರಮಾಣಪತ್ರ ಪಡೆದು ವಿದ್ಯಾರ್ಥಿಯು ಕಾಲೇಜಿನಿಂದ ಹೊರನಡೆದರೆ ಉದ್ಯೋಗ ಕೊಡಿಸುವುದಾದರೂ ಯಾರು? ಇಂತಹ ಹಲವಾರು ಸಮಸ್ಯೆಗಳು ಇದರಿಂದ ಉದ್ಭವಿಸುತ್ತದೆ ಹಾಗೂ ಮೌಲ್ಯಯುತ ಶಿಕ್ಷಣ ಪಡೆಯುವಲ್ಲಿ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಸಮಸ್ಯೆಗಳ ಗೋಪುರವಾದ ಹೊಸ ರಾಷ್ಟೀಯ ಶಿಕ್ಷಣ ನೀತಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜಾರಿ ಮಾಡಲು ಹೊರಟಿರುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನೇತೃತ್ವದಲ್ಲಿ ಆಗಸ್ಟ್ 10ರಂದು ಬೆಳಿಗ್ಗೆ 10:30 ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮಾರ್ಚ್ ನಡೆಸಲು ತೀರ್ಮಾನಿಸಲಾಗಿದೆಯೆಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡರಾದ ಸಿರಾಜ್ ಮಂಗಳೂರು, ಮಂಗಳೂರು ನಗರ ಜಿಲ್ಲಾಧ್ಯಕ್ಷ ಇನಾಯತ್ ಅಲಿ ಉಪಸ್ಥಿತರಿದ್ದರು.