ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳ ಬಂಧನ ಖಂಡಿಸಿ ಶಿವಮೊಗ್ಗದಲ್ಲಿ CFI ಪ್ರತಿಭಟನೆ

Prasthutha|

ಶಿವಮೊಗ್ಗ: ರಾಜ್ಯ ಸರ್ಕಾರದ ದುರಾಡಳಿತ ಹಾಗೂ ತಾರತಮ್ಯ ಧೋರಣೆಯ ವಿರುದ್ಧ ಪ್ರತಿಭಟಿಸಿದ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಚಾಂದ್ ಸಲ್ಮಾನ್ ಸೇರಿದಂತೆ ಕೊಪ್ಪಳ ಜಿಲ್ಲೆಯ ಕಾರ್ಯಕರ್ತರ ಬಂಧನವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ನಗರದ ಮಹಾವೀರ ವೃತ್ತ ನಲ್ಲಿ ಪ್ರತಿಭಟನೆ ನಡೆಯಿತು.

- Advertisement -

 ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಸೈಯದ್ ಲುಕ್ ಮಾನ್ , ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರವು ಒಂದು ವರ್ಷದಿಂದ ದ್ವೇಷದ, ತಾರತಮ್ಯದ ಆಡಳಿತ ನಡೆಸುತ್ತಿದ್ದು ಇದನ್ನು ವಿರೋಧಿಸಿ ಸಂವಿಧಾನಾತ್ಮಕವಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಬಂಧಿಸಿ ಹಿಂಸಿಸಿ ಜೈಲಿಗಟ್ಟಿದ ಕೊಪ್ಪಳ ಪೊಲೀಸರ ಕ್ರಮ ಖಂಡನೀಯ. ತಕ್ಷಣ ಬಂಧಿತ ವಿದ್ಯಾರ್ಥಿಗಳ ಮೇಲೆ ದಾಖಲಿಸಿದ ಕೇಸನ್ನು ವಾಪಸು ಪಡೆದು ಬಿಡುಗಡೆಗೊಳಿಸಬೇಕು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೋಲಿಸರ ಮೇಲೆ ಕ್ರಮ ಕೈಗೊಂಡು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು.

ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದು, ಅದರಲ್ಲೂ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿದ ನಂತರ ಆರ್ ಎಸ್ ಎಸ್ ನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಈ ಒಂದು ವರ್ಷದ ಬೊಮ್ಮಾಯಿ ಆಡಳಿತದಲ್ಲಿ ದಿನನಿತ್ಯ ವಿವಿಧ ವಿವಾದಗಳು ರಾಜ್ಯದಲ್ಲಿ ಕಂಡುಬಂದಿದ್ದು ಗಮನಿಸಬಹುದಾಗಿದೆ. ಶೈಕ್ಷಣಿಕ ರಂಗದಲ್ಲಾಗಲಿ, ಸಾಮಾಜಿಕ ರಂಗದಲ್ಲಾಗಲಿ ಅಭಿವೃದ್ಧಿಯ ವಿಷಯದಲ್ಲಾಗಲಿ ಯಾವುದೇ ಬೆಳವಣಿಗೆಗಳು ಈ ಅವಧಿಯಲ್ಲಿ ಕಂಡುಬಂದಿಲ್ಲ. ಬದಲಾಗಿ 40% ಕಮಿಷನ್ ದಂಧೆ, ಭ್ರಷ್ಟಾಚಾರ, ಹಿಜಾಬ್, ಹಲಾಲ್, ವ್ಯಾಪಾರ ವಹಿವಾಟು ನಿರ್ಬಂಧ, ಪಿಎಸ್ ಐ ಹಗರಣ, ಮೊಟ್ಟೆ ಹಗರಣ, ಸಮವಸ್ತ್ರ ಹಗರಣ, ಪ್ರಚೋದನಾಕಾರಿ ಭಾಷಣಗಳು ಇದೀಗ ಇದನ್ನೆಲ್ಲಾ ಮರೆಮಾಚಲು ಶವ ರಾಜಕೀಯ ನಡೆಸಲು ಬೊಮ್ಮಾಯಿ ಸರ್ಕಾರ ಮುಂದಾಗಿದೆ. ಅದರಲ್ಲೂ ಅಲ್ಪಸಂಖ್ಯಾತರನ್ನು ನೇರವಾಗಿ ಗುರಿಯಾಗಿಸಿದ ಸರ್ಕಾರ ರಾಜ್ಯದ ಅಲ್ಪಸಂಖ್ಯಾತರಿಗೆ ಮುಖ್ಯಮಂತ್ರಿ ಇದ್ದಾರೋ? ಎಂಬ ಸಂಶಯ ಮೂಡಿದೆ. ದ.ಕ ಜಿಲ್ಲೆಯಲ್ಲಿ ಮೂರು ಸರಣಿ ಹತ್ಯೆಗಳು ನಡೆದಿದ್ದರೂ ಪರಿಹಾರ ಒದಗಿಸುವುದರಲ್ಲೂ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿರುವ ಬೊಮ್ಮಾಯಿ ಯಾರನ್ನು ಸಂತೋಷ ಪಡಿಸಲು ಹೊರಟಿದ್ದಾರೆ ಎಂಬ ಅವರು ಪ್ರಶ್ನಿಸಿದರು.

- Advertisement -

  ಈ ಅನ್ಯಾಯವನ್ನು ಖಂಡಿಸಿ ಪ್ರಜಾಸತ್ತಾತ್ಮಕವಾಗಿ ಬೀದಿಗಿಳಿದರೆ ಧ್ವನಿಯನ್ನು ಅಡಗಿಸುವ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ. ಈ ಬೊಮ್ಮಾಯಿ ಸರ್ಕಾರದ ದುರಾಡಳಿತ ಕೊನೆಗೊಳ್ಳಬೇಕಾಗಿದೆ. ಸರ್ಕಾರ ತಮ್ಮ ಅಧಿಕಾರವನ್ನು ಎಷ್ಟೇ ದುರುಪಯೋಗಪಡಿಸಿ ಭಿನ್ನ ಧ್ವನಿಗಳನ್ನು ಧಮನಿಸಲು ಪ್ರಯತ್ನಿಸಿದರೂ ರಾಜ್ಯ ಸರ್ಕಾರದ ಈ ದ್ವೇಷ ಆಡಳಿತವನ್ನು ಬೀದಿ ಬೀದಿಗಳಲ್ಲಿ ವಿದ್ಯಾರ್ಥಿ ಸಮೂಹ ಇನ್ನೂ ಕೂಡ ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಲಿದ್ದೇವೆಯೆಂದು ಎಚ್ಚರಿಸಿದರು.

 ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಜಮಾಲ್ , ಉಪಾಧ್ಯಕ್ಷರಾದ   ಮುಷಾಯಿದ್, ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಫೈರೋಜ್, ಸಫೀರ್ ಭಾಗವಹಿಸಿದ್ದರು.



Join Whatsapp