ಕ್ಯಾಂಪಸ್ ಫ್ರಂಟ್ ಸದಸ್ಯತ್ವ ಅಭಿಯಾನಕ್ಕೆ ಕಲಬುರಗಿಯಲ್ಲಿ ಚಾಲನೆ

Prasthutha|

ಕಲಬುರಗಿ: ಭ್ರಷ್ಟ ಮತ್ತು ಕೋಮುವಾದಿ ನಿಲುವು ಹೊಂದಿರುವ ಸರ್ಕಾರದ ವಿರುದ್ಧ ಬೃಹತ್ ವಿದ್ಯಾರ್ಥಿ ಕ್ರಾಂತಿಯನ್ನು ರೂಪಿಸಲು ‘Deffending Dissent, Ascending Front ಎಂಬ ಘೋಷ ವಾಕ್ಯದೊಂದಿಗೆ ಕ್ಯಾಂಪಸ್ ಫ್ರಂಟ್ ಸದಸ್ಯತ್ವ ಅಭಿಯಾನ -2021 ಹಮ್ಮಿಕೊಂಡಿದೆ.

- Advertisement -

ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಸಿಎಫ್ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಗಸ್ಟ್ 13 ರಿಂದ ಸೆಪ್ಟೆಂಬರ್ 30 ರವರೆಗೆ ಸದಸ್ಯತ್ವ ಅಭಿಯಾನ ನಡೆಸಲಿದ್ದು, ರಾಜ್ಯದ ಉದ್ಘಾಟನಾ ಸಮಾರಂಭವು ಆಗಸ್ಟ್ 17 ರಂದು ಬಾಗಲಕೋಟೆಯಲ್ಲಿ ನಡೆಯಲಿದೆ ಎಂದರು.

ಪ್ರಜಾಪ್ರಭುತ್ವ ದೇಶದಲ್ಲಿ ವಿಶೇಷ ಜವಾಬ್ದಾರಿಯುತ ನಾಗರಿಕರಾಗಿರುವ ವಿದ್ಯಾರ್ಥಿ ಸಮೂಹವು ದಬ್ಬಾಳಿಕೆಯ ಧೋರಣೆಗಳನ್ನು ಕಂಡು ಮೌನವಾಗಿರಲು ಸಾಧ್ಯವಿಲ್ಲ. ಟೀಕೆ, ಪ್ರಶ್ನೆ ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕ. ಈ ಹಕ್ಕುಗಳು ಇಂದು ದಮನವಾಗುತ್ತಿವೆ. ಸರಕಾರವನ್ನು ಪ್ರಶ್ನಿಸುವ ಅಸಮ್ಮತಿಯ ಭಿನ್ನಾಭಿಪ್ರಾಯದ ಟೀಕೆಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಥಾವುಲ್ಲಾ ಹೇಳಿದರು.

- Advertisement -

ಅದೇ ರೀತಿ ಭಾರತೀಯ ಸಂವಿಧಾನವನ್ನು ಹಿಂದುತ್ವ ಫ್ಯಾಶಿಸಂ ಕಪಿಮುಷ್ಟಿಯಿಂದ ರಕ್ಷಿಸುವುದು ದೇಶಪ್ರೇಮವಾಗಿದೆ. ಜನಾಭಿಪ್ರಾಯವನ್ನು ನಾಶಗೊಳಿಸುವ ಬಿಜೆಪಿ ಸರ್ವಾಧಿಕಾರ ಮತ್ತು ಆಡಳಿತ ಧೋರಣೆಯೆಂಬ ಕರಿಛಾಯೆಗಳನ್ನು ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಒಂದು ಜನಾಂದೋಲನವನ್ನು ಸೃಷ್ಟಿಸುವ ಮೂಲಕ ವಿರೋಧಿಸಬೇಕಾಗಿದೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನ್ಯಾಯ ಮತ್ತು ಸಮಾನತೆಯ ಆಧಾರದ ಮೇಲೆ ಪ್ರಜಾಪ್ರಭುತ್ವ ರಾಷ್ಟ್ರವನ್ನು ಸ್ಥಾಪಿಸಲು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಅಥಾವುಲ್ಲಾ ಹೇಳಿದರು.

ಕ್ಯಾಂಪಸ್ ಫ್ರಂಟ್ ನಾಯಕರಾದ ಅತಿಕುರ್ ರೆಹಮಾನ್, ಮಸೂದ್ ಅಹ್ಮದ್ ಮತ್ತು ರೌಫ್ ಶರೀಫ್ ಒಳಗೊಂಡ ಹಲವು ವಿದ್ಯಾರ್ಥಿ ನಾಯಕರು ಪ್ರಜಾಪ್ರಭುತ್ವದ ಕಾವಲಾಳುಗಳಾಗಿದ್ದಕ್ಕಾಗಿ ಇಂದು ಜೈಲಿನಲ್ಲಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ರಾಷ್ಟ್ರ ನಿರ್ಮಾಣ ಹಾಗೂ ಪ್ರಗತಿಪರ ಚಟುವಟಿಕೆಗಳಲ್ಲಿ ನಮ್ಮ ನಾಯಕರು ಮತ್ತು ಸದಸ್ಯರು ಮುಂಚೂಣಿಯಲ್ಲಿದ್ದಾರೆ. ನಾವು ಶಿಕ್ಷಣದಿಂದ ವಂಚಿತಾಗುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ, ಸಮಾಲೋಚನೆ ಮತ್ತು ಅಧ್ಯಯನ ಸಾಮಾಗ್ರಿಗಳನ್ನು ಒದಗಿಸುತ್ತಿದ್ದೇವೆ. ಮಾತ್ರವಲ್ಲ ನಮ್ಮ ಕಾರ್ಯಕರ್ತರು, ಕೋವಿಡ್ ಸಾಂಕ್ರಾಮಿಕದ ಸಂದಿಗ್ಧತೆಯಲ್ಲಿ ಮತ್ತು ಇತರ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಜನಸಾಮಾನ್ಯರೊಂದಿಗೆ ಸೇವಾನಿರತರಾಗಿದ್ದರು ಎಂದು ಅವರು ವಿವರಿಸಿದರು.

ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ರಾಷ್ಟ್ರದಾದ್ಯಂತ ಎಲ್ಲಾ ಸಮರ್ಪಿತ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಪ್ರಬಲ ಆಂದೋಲನದ ಕಡೆ ಹೆಜ್ಜೆಯಿಡಬೇಕು. ಭವಿಷ್ಯದ ಭಾರತಕ್ಕಾಗಿ ಧೈರ್ಯಶಾಲಿ ವಿದ್ಯಾರ್ಥಿ ನಾಯಕರನ್ನು ನಿರ್ಮಿಸಲು ನಮ್ಮೊಂದಿಗೆ ಸೇರಿಕೊಳ್ಳಲು ನಾವು ಎಲ್ಲಾ ವಿದ್ಯಾರ್ಥಿಗಳಿಗೆ ಅಹ್ವಾನ ನೀಡುತ್ತಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಲ್ತಾಫ್ ಹೊಸಪೇಟೆ, ರಾಜ್ಯ ಸಮಿತಿ ಸದಸ್ಯ ಝುಬೈರ್ ಬೆಂಗಳೂರು, ಗುಲ್ಬರ್ಗ ಜಿಲ್ಲಾಧ್ಯಕ್ಷ ಇರ್ಫಾನ್ ಮತ್ತಿತರರು ಉಪಸ್ಥಿತರಿದ್ದರು.



Join Whatsapp