ಬೆಂಗಳೂರಿನಲ್ಲಿ ಕಾಂಗೋ ವಿದ್ಯಾರ್ಥಿಯ ಕಸ್ಟಡಿ ಸಾವಿಗೆ ಸೇಡು : ಕಾಂಗೋದಲ್ಲಿ ಭಾರತೀಯ ವ್ಯಾಪಾರ ಮಳಿಗೆಗಳ ಮೇಲೆ ದಾಳಿ !

Prasthutha|

ಕಿನ್ಶಾಸ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿಯಾದ ಕಿನ್ಶಾಸದಲ್ಲಿ ಗುರುವಾರ ಅನಿವಾಸಿ ಭಾರತೀಯರ ಮೇಲೆ ಮತ್ತು ವಾಹನದ ಮೇಲೆ ದುಷ್ಕರ್ಮಿಗಳು ಭೀಕರವಾಗಿ ದಾಳಿ ನಡೆಸಿರುವ ಕುರಿತು ಮಾಧ್ಯಮಗಳು ವರದಿ ಮಾಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾಂಗೋ ವಿದ್ಯಾರ್ಥಿಯ ಕಸ್ಟಡಿ ಸಾವಿನ ಆರೋಪದ ಹಿನ್ನೆಲೆಯಲ್ಲಿ ಈ ಹಿಂಸಾಚಾರ ನಡೆದಿದೆಯೆಂದು ಹೇಳಲಾಗುತ್ತಿದೆ.

- Advertisement -

ಜೋಯಲ್ ಶಿಂದಾನಿ ಮಾಲು (27) ಅವರನ್ನು ಡ್ರಗ್ಸ್ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ ಆಗಸ್ಟ್ 1 ರಂದು ಬೆಂಗಳೂರಿನ ಜೆಸಿ ನಗರ ಪೊಲೀಸರು ಬಂಧಿಸಿದ್ದರು. ಮರುದಿನ ಮಾಲು ಅವರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದಿದ್ದರು. ಈ ಸಾವಿನ ಕುರಿತು ಜೆಸಿ ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕಾಂಗೋ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಬೆಂಗಳೂರು ಪೊಲೀಸರು ಅವನನ್ನು ಥಳಿಸಿ ಕೊಂದು ಹಾಕಿದ್ದಾರೆಂದು ಆರೋಪಿಸಿ ವಿದೇಶಿ ವಿದ್ಯಾರ್ಥಿಗಳು ದಾಂಧಲೆ ನಡೆಸಿದ್ದರು. ಆ ಬಳಿಕ ಪೊಲೀಸರು ಲಘು ಲಾಠಿಚಾರ್ಜ್ ನಡೆಸಿ ಆಕ್ರೋಶಿತ ವಿದ್ಯಾರ್ಥಿ ಗುಂಪನ್ನು ಚದುರಿಸಿದ್ದರು. ಲಾಠಿಚಾರ್ಜ್ ಹಿನ್ನೆಲೆಯಲ್ಲಿ ಹಲವು ಕಾಂಗೋ ಮೂಲದ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಂಧಿತ ವಿದ್ಯಾರ್ಥಿ ಮಾಲು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆಯೇ ಹೊರತು ಪೊಲೀಸರ ದೌರ್ಜನ್ಯದಿಂದಲ್ಲವೆಂದು ಸ್ಪಷ್ಟಪಡಿಸಿದ್ದರು.

ಬೆಂಗಳೂರಿನಲ್ಲಿ ವಿದ್ಯಾರ್ಥಿಯ ಸಾವು ಮತ್ತು ನಂತರದ ಲಾಠಿಚಾರ್ಜ್ ಗೆ ಸೇಡಿನ ನಡೆಯೆಂಬಂತೆ ನಿನ್ನೆ ಗುರುವಾರ ಕಾಂಗೋದ ಕಿನ್ಶಾಸದಲ್ಲಿ ಭಾರತೀಯರ ಮಳಿಗೆಗಳನ್ನು ಲೂಟಿ ಮಾಡಿ, ಕಾರನ್ನು ಸುಟ್ಟು ಹಾಕಿದ್ದಾರೆ. ಮಾತ್ರವಲ್ಲದೆ ಇತರ ಮೂರು ವಾಹನಗಳಿಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಲಾಗಿದೆಯೆಂದು ಪೊಲೀಸರು ಖಚಿತಪಡಿಸಿದ್ದಾರೆ. ಘಟನೆಯ ಸಂಬಂಧ ಮೂವರನ್ನು ಬಂಧಿಸಿ, ಲೂಟಿ ಮಾಡಿದ 40 ಮೂಟೆಗಳನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಪೊಲೀಸ್ ಆಯುಕ್ತ ಸಿಲ್ವನೋ ಕಸಂಗೊ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಆಫ್ರಿಕನ್ ದೇಶಗಳ ಜನರು ಭಾರತದಲ್ಲಿ ಜನಾಂಗೀಯ ಪೂರ್ವಾಗ್ರಹ ಮತ್ತು ಹಿಂಸೆಯನ್ನು ಎದುರಿಸುತ್ತಿರುವ ಬಗ್ಗೆ ಅನೇಕ ವರದಿಗಳು ಬಂದಿವೆ.

Join Whatsapp