ಕೇಂದ್ರ ರಾಜ್ಯ ಸರ್ಕಾರ ಕೊಡಗಿಗೆ ನೀಡಿದ ಅನುದಾನ ಬಹಿರಂಗಪಡಿಸಲಿ: ಸರಿತಾ ಪೂಣಚ್ಚ

Prasthutha|

ಮಡಿಕೇರಿ: ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಕೊಡಗು ಜಿಲ್ಲೆಗೆ ಬಂದ  ಅನುದಾನಗಳನ್ನು ಬಹಿರಂಗಪಡಿಸಲಿ ಎಂದು ಕಾಂಗ್ರೆಸ್ ವಕ್ತಾರೆ ಸರಿತಾ ಪೂಣಚ್ಚ ಒತ್ತಾಯಿಸಿದ್ದಾರೆ.

- Advertisement -

2018 ರಲ್ಲಿ ಪ್ರವಾಹ, ಪ್ರಕೃತಿ ವಿಕೋಪಕ್ಕೆ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಮನೆ ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಅಂದು ಸಮ್ಮಿಶ್ರ ಸರ್ಕಾರವಿದ್ದಾಗ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಜಾಗ ಗುರುತಿಸಿ ಸಾವಿರಾರು ಮನೆಗಳನ್ನು ಕಟ್ಟಿ ಕೊಟ್ಟಿದ್ದಾರೆ.

ಬಿಜೆಪಿ ಆಡಳಿತದಲ್ಲಿರುವ ಕೇಂದ್ರ ಸರಕಾರ ಯಾವುದೇ ಅನುದಾನ ನೀಡದೆ  ಕೊಡಗು ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

- Advertisement -

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮಳೆ ಹಾನಿಯಿಂದ  ಸಾವಿರಾರು ಎಕರೆ ಕೃಷಿ ಬೆಳೆ ನಾಶವಾಗಿದೆ.

ಜಿಲ್ಲೆಯ ರೈತರು ಹಲವು ಬಾರಿ ಪರಿಹಾರಕ್ಕಾಗಿ ಮನವಿ ಮಾಡಲಾಗಿದ್ದರೂ ಇಂದಿಗೂ ಬಹುತೇಕ ಮಂದಿಗೆ ಪರಿಹಾರವೂ ಸಿಗದೆ  ಕಂಗಾಲಾಗಿದ್ದಾರೆ. ಸಾಲ ಮಾಡಿ

ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತಾಪಿ ವರ್ಗ ಕಾಡು ಪ್ರಾಣಿಗಳ ಹಾವಳಿ ನಡುವೆ ಮಳೆಹಾನಿಯಿಂದ ಪ್ರತಿವರ್ಷ ಸಂಕಷ್ಟ ಎದುರಿಸುತ್ತಿದ್ದಾರೆ.

ಜಿಲ್ಲೆಯನ್ನು ಪ್ರತಿನಿಧಿಸಿದ ಸಂಸದ ಪ್ರತಾಪ್ ಸಿಂಹ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದೆ ಮೈಸೂರಿಗೆ ಸೀಮಿತವಾಗಿದ್ದಾರೆ‌. ಕೇಂದ್ರದಿಂದ ಯಾವುದೇ ಮಳೆಹಾನಿ ಪರಿಹಾರ ತರದೆ ಜಿಲ್ಲೆಗೆ ಮಲತಾಯಿ ದೋರಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಜನಪ್ರತಿನಿಧಿಗಳು ಭರವಸೆಯ ಮಾತುಗಳನ್ನಾಡುತ್ತಾರೆ ಹೊರತು ರಾಜ್ಯ ಸರಕಾರದಿಂದ ಮಳೆ ಹಾನಿಗೆ ಸಂಬಂಧಿಸಿದ  ಅನುದಾನ ಗಳನ್ನು ತರುವಲ್ಲಿ ವಿಫಲರಾಗಿದ್ದಾರೆ. ಕೊಡಗು ಜಿಲ್ಲೆಗೆ ಕೋಟಿ ಕೋಟಿ ಅನುದಾನ ಬರುತ್ತಿದೆ ಎನ್ನುವ ಜನಪ್ರತಿನಿಧಿಗಳು ಅಭಿವದ್ಧಿ ಮಾಡಿರುವುದಾದರು ಎಲ್ಲಿ ಎಂದು ಪ್ರೆಶ್ನಿಸಿದ ಅವರು, 2018-19 ರ ನಂತರ ಪ್ರಕೃತಿ ವಿಕೋಪದಲ್ಲಿ ನಷ್ಟವಾಗಿರುವ ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಣೆಯಾಗಿದೆಯೇ, ಪ್ರತಿ ಬಾರಿಯೂ ಎನ್.ಡಿ.ಆರ್.ಎಫ್  ಫಂಡ್ ನ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಕೇಂದ್ರದಿಂದ ಜಿಲ್ಲೆಗೆ ಪ್ರತ್ಯೇಕ ಅನುದಾನ ತಂದಿದ್ದಾರೆಯೇ, 3 ಬಾರಿ ಗೆದ್ದ ಜನಪ್ರತಿನಿಧಿಗಳಿಗೆ ಸಾಕ್ಷಿಯಾಗಿ ಪ್ರತಿ ಭಾಗದಲ್ಲೂ ರಸ್ತೆ, ಕುಡಿಯುವ ನೀರು, ವಿದ್ಯುತ್, ನಿವೇಶನ, ಕಾಡು ಪ್ರಾಣಿಗಳ ಹಾವಳಿ, ರೈತರ ಬೆಳೆ ನಷ್ಟ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳು ಇಂದಿಗೂ ಜಿಲ್ಲೆಯಲ್ಲಿದೆ. ನದಿ ನೀರಿನ ಪ್ರವಾಹ ಸಂದರ್ಭದಲ್ಲಿ ಮನೆ ಆಸ್ತಿಪಾಸ್ತಿ ಕಳೆದುಕೊಂಡ ಸಂತ್ರಸ್ಥರು ಇಂದಿಗೂ ಮಳೆ, ಗಾಳಿ, ಚಳಿಯ  ನಡುವೆ ಮತ್ತೆ ಪ್ರವಾಹದ ಭೀತಿಯಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದಾರೆ.

3 ವರ್ಷ ಕಳೆದರೂ ಶಾಶ್ವತ ಸೂರು ಪರಿಹಾರ ಸಿಗದೆ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಗೆ ಪ್ರತ್ಯೇಕ ಅನುದಾನ ತರುವಲ್ಲಿ ವಿಫಲರಾಗಿರುವ ಜನಪ್ರತಿನಿಧಿಗಳ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳಿಗೆ ಮುಂದಿನ ಚುನಾವಣೆಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Join Whatsapp