ನವದೆಹಲಿ: ಗೋಧಿ ಬೆಳೆಯುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಕ್ಕೂಟ ಸರಕಾರವು ಖರೀದಿ ಕಾಲ ಬೇಗ ಮುಗಿಯುವುದರಿಂದ ಮೇ 31ರವರೆಗೆ ಕೊಳ್ಳುವಿಕೆ ಮುಂದುವರಿಸುವಂತೆ ಸೂಚಿಸಿದೆ. ಮೇ 15ರ ಹೇಳಿಕೆಯಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ಈ ಸೂಚನೆ ಕೊಟ್ಟಿದೆ.
ಗೋಧಿ ಖರೀದಿ ಅವಧಿಯನ್ನು ಹೆಚ್ಚಿಸುವುದರಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದು ಸಚಿವಾಲಯ ಹೇಳಿದೆ. ಹಾಗೆಯೇ ಕೇಂದ್ರೀಯ ಖರೀದಿಯಡಿ ಗೋಧಿ ಖರೀದಿ ಮುಂದುವರಿಸಲು ಎಫ್ ಸಿಐ- ಭಾರತೀಯ ಆಹಾರ ನಿಗಮಕ್ಕೆ ಕೂಡ ಸಚಿವಾಲಯ ತಿಳಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗೋಧಿ ಕೊಳ್ಳುವ ಅವಧಿಯನ್ನು ಅಧಿಕರಿಸುವಂತೆ ಕೇಳಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಯಿತು ಎಂದೂ ಸಚಿವಾಲಯ ತಿಳಿಸಿದೆ.
ಕೇಂದ್ರದ ಒಗ್ಗೂಡಿಸುವಿಕೆಯಡಿ 2022-23ರ ರಬಿ ಕೊಯ್ಲು ಮಾರುಕಟ್ಟೆ ಕಾಲದಲ್ಲಿ ಮಧ್ಯ ಪ್ರದೇಶ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಬಿಹಾರ, ರಾಜಸ್ತಾನಗಳಲ್ಲಿ ಗೋಧಿ ಖರೀದಿ ನಡೆಯುತ್ತದೆ. ರಬಿ ಕೊಯ್ಲು ಮಾರ್ಚ್ ಏಪ್ರಿಲ್ ಗಳಲ್ಲಿ ನಡೆಯುತ್ತದೆ.
ಕೇಂದ್ರ ಧಾನ್ಯ ಒಗ್ಗೂಡಿಸುವಿಕೆಯಡಿ ಗೋಧಿ ಖರೀದಿಯು 2022-23ರಲ್ಲಿ 2021-21ಕ್ಕಿಂತ ಕಡಿಮೆ ಆಗಿದೆ. ಅದಕ್ಕೆ ಕಾರಣ ಸರಕಾರದ ದರಕ್ಕಿಂತ ಹೆಚ್ಚು ದರ ಹೊರಗೆ ಸಿಗುತ್ತಿರುವುದರಿಂದ ರೈತರು ಕಾಸಗಿ ವ್ಯಾಪಾರಿಗಳಿಗೆ ಗೋಧಿ ಮಾರುತ್ತಿದ್ದಾರೆ.
ಈ ಕಾರಣಕ್ಕೆ ಮೇ 13ರಂದು ಕೇಂದ್ರ ಸರಕಾರವು ಗೋಧಿ ರಫ್ತು ಮಾಡುವುದಕ್ಕೆ ತಡೆ ನೀಡಿದೆ. ನೆರೆಯ ಮತ್ತು ಆಹಾರ ಕೊರತೆಯ ದೇಶಗಳಿಗೆ ಮೊದಲೇ ಹಣ ನೀಡಿ ಆಗಿರುವ ಒಪ್ಪಂದದ ಮಟ್ಟಿಗೆ ಮಾತ್ರ ಈಗ ರಫ್ತು ಮಾಡಲು ಅವಕಾಶವಿದೆ.
2021-22ರಲ್ಲಿ 367 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿ ಆಗಿದ್ದರೆ, 2022-23ರಲ್ಲಿ ಮೇ 14ರವರೆಗೆ 180 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿ ಮಾತ್ರ ಆಗಿದೆ.
2021-22ರಲ್ಲಿ ಈ ಕೊಳ್ಳುವಿಕೆಯಲ್ಲಿ ಬೆಂಬಲ ಬೆಲೆಯಾಗಿ 16.83 ಲಕ್ಷ ರೈತರಿಗೆ ರೂ. 36,208 ಕೋಟಿ ಸಂದಾಯವಾಗಿದೆ ಎಂದೂ ಸಚಿವಾಲಯ ಹೇಳಿದೆ.