ಹೈದರಾಬಾದ್: ತೆಲಂಗಾಣದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಆಡಳಿತಾರೂಢ TRS ಸರ್ಕಾರದ ವಿರುದ್ಧ ಗುಡುಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ 2ನೇ ಹಂತದ ಪಾದಯಾತ್ರೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಟಿಆರ್‌ಎಸ್ ಸರ್ಕಾರವು ಧರ್ಮಾಧಾರಿತ ಮೀಸಲು ಜಾರಿಗೆ ತರಲು ಹೊರಟಿದ್ದು, ಇದರಿಂದ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಮುಸ್ಲಿಮರಿಗೆ ಶೇ.12ರಷ್ಟು ಮೀಸಲು ನೀಡಲು ಮುಂದಾಗಿದ್ದು, ಇದನ್ನು ನಾವು ಕೊನೆಗೊಳಿಸುತ್ತೇವೆ ಎಂದು ಶಾ ಹೇಳಿದ್ದಾರೆ
ಮುಂದಿನ ವರ್ಷ ತೆಲಂಗಾಣ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಬಿಜೆಪಿ ಕೊನೆಗೊಳಿಸಲಿದೆ. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಇದರ ಪ್ರಯೋಜನ ನೀಡಲಿದೆ ಎಂದು ಘೋಷಿಸಿದ್ದಾರೆ.
ಆಡಳಿತಾರೂಢ ಟಿಆರ್‌ಎಸ್ ಸರ್ಕಾರವು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇ.4 ರಷ್ಟಿದ್ದ ಮೀಸಲಾತಿಯನ್ನು 2014ರ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಶೇ.12ಕ್ಕೆ ಹೆಚ್ಚಿಸಲು ಮುಂದಾಯಿತು. ಏಪ್ರಿಲ್ 2017 ರಲ್ಲಿ, ತೆಲಂಗಾಣ ವಿಧಾನಸಭೆಯು ಮುಸ್ಲಿಮರಿಗೆ ಶೇ.4 ರಿಂದ 12, ಪರಿಶಿಷ್ಟ ಪಂಗಡಗಳಿಗೆ ಶೇ.6 ರಿಂದ 10ಕ್ಕೆ ಮೀಸಲಾತಿಯನ್ನು ಹೆಚ್ಚಿಸುವ ಮಸೂದೆಯನ್ನು ಅಂಗೀಕರಿಸಿತು. ಮಸೂದೆಯನ್ನು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸಿದೆ. ಆದರೆ, ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸಿದೆ ಎಂದು ಹೇಳಿದ್ದಾರೆ.