ಕೆಮ್ಮಿನ ಸಿರಪ್ ತಯಾರಿಕಾ ಕಂಪನಿಯ ಪರವಾನಗಿ ರದ್ದುಗೊಳಿಸಲು ಕೇಂದ್ರ ಸೂಚನೆ

Prasthutha|

ಹೊಸದಿಲ್ಲಿ: ಉಜ್ಬೇಕಿಸ್ತಾನದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ತಯಾರಿಕಾ ಕಂಪನಿ ಮರಿಯನ್ ಬಯೋಟೆಕ್ ಪರವಾನಗಿ ರದ್ದುಗೊಳಿಸುವಂತೆ ಉತ್ತರ ಪ್ರದೇಶದ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ.

- Advertisement -

ಕಂಪನಿಯಿಂದ ಪರೀಕ್ಷೆಗಾಗಿ ಪಡೆಯಲಾದ 36 ಮಾದರಿಗಳ ಪೈಕಿ 22ರಲ್ಲಿ ಎಥಿಲೀನ್ ಗ್ಲೈಕೋಲ್ (Ethylene glycol) ಕಲಬೆರಕೆಯಾಗಿರುವುದು ಕಂಡುಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಗೌತಮ ಬುದ್ಧ ನಗರದ ಡ್ರಗ್ ಇನ್​ಸ್ಪೆಕ್ಟರ್ ತಿಳಿಸಿದ್ದಾರೆ.

ಕೆಮ್ಮಿನ ಔಷಧಿ ಸೇವಿಸಿ 18 ಮಕ್ಕಳು ಪ್ರಾಣ ಕಳೆದುಕೊಂಡ ದಾರುಣ ಘಟನೆ ಉಜ್ಬೇಕಿಸ್ತಾನದಲ್ಲಿ ಜನವರಿಯಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ, ಭಾರತದ 2 ಕೆಮ್ಮಿನ ಸಿರಪ್​ಗಳನ್ನು ಬಳಸದಂತೆ ಉಜ್ಬೇಕಿಸ್ತಾನಕ್ಕೆ ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡಿತ್ತು.

- Advertisement -

ಮೆರಿಯನ್ ಬಯೋಟೆಕ್‌ನಿಂದ ತಯಾರಿಸಲ್ಪಟ್ಟ ಉತ್ಪನ್ನಗಳು ಗುಣಮಟ್ಟದ ಮಾನದಂಡಗಳು ಅಥವಾ ವಿಶೇಷಣಗಳನ್ನು ಪೂರೈಸಲು ವಿಫಲವಾಗಿವೆ. ಹೀಗಾಗಿ ಅವುಗಳನ್ನು ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಇದಕ್ಕೂ ಮುನ್ನೆ ಕೆಮ್ಮಿನ ಔಷಧ ಸೇವಿಸಿ ಗ್ಯಾಂಬಿಯಾದಲ್ಲಿಯೂ ಮಕ್ಕಳು ಮೃತಪಟ್ಟಿದ್ದರು.

ಮಹಾರಾಷ್ಟ್ರದಲ್ಲಿ 6 ಕೆಮ್ಮು ಸಿರಪ್ ತಯಾರಕರ ಪರವಾನಗಿ ರದ್ದುಗೊಳಿಸಿದ ಬೆನ್ನಲ್ಲೇ ಮೆರಿಯನ್ ಬಯೋಟೆಕ್‌ ಪರವಾನಗಿ ರದ್ದತಿ ನಿರ್ಧಾರವೂ ಪ್ರಕಟವಾಗಿದೆ. ಮಹಾರಾಷ್ಟ್ರದಲ್ಲಿ 6 ಕೆಮ್ಮು ಸಿರಪ್ ತಯಾರಕರ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ 108 ಕೆಮ್ಮು ಸಿರಪ್ ತಯಾರಕರ ಪೈಕಿ 84 ತಯಾರಕರ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆಯನ್ನು ಪ್ರಾರಂಭಿಸಿದೆ ಎಂದು ಸಚಿವ ಸಂಜಯ್ ರಾಥೋಡ್ ಶನಿವಾರ ಬೆಳಿಗ್ಗೆ ತಿಳಿಸಿದ್ದರು.

ನಿಯಮಗಳನ್ನು ಉಲ್ಲಂಘಿಸಿದ 17 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದೂ ಸಚಿವರು ಮಾಹಿತಿ ನೀಡಿದ್ದರು. ಭಾರತದಿಂದ ಆಮದು ಮಾಡಿಕೊಂಡ ಕೆಮ್ಮು ಸಿರಪ್‌ನಿಂದಾಗಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವನ್ನಪ್ಪಿದ್ದರು.

Join Whatsapp