ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಕೃಷಿ, ಕಂದಾಯ ಸಚಿವರು ಕೇಂದ್ರ ಸರ್ಕಾರಕ್ಕೆ ಆರೋಪಗಳನ್ನು ಮಾಡಿ ಪತ್ರ ಬರೆದು, ಆ ಪತ್ರ ನಮಗೆ ತಲುಪುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹಾಕ್ತಾರೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿಸಿಲ್ಲ. ರಾಜ್ಯ ಸರ್ಕಾರದ ಪತ್ರಗಳಿಗೆ ನಾನು ಕಾಯುತ್ತಿದ್ದೇನೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜನೌಷಧಿ ಕೇಂದ್ರ ಉದ್ಘಾಟನೆಗೆ ಕೇಂದ್ರ ಸಚಿವೆ ಆಗಮಿಸಿದ್ದು, ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು. ನಾನು ಕೇರಳದಲ್ಲಿಯೂ ಹೇಳಿದ್ದೇನೆ. ಪ್ರಧಾನಿ ಆಗುವ ಮುನ್ನವೇ 10 ವರ್ಷ ಕಾಲ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿಯವರಿಗೆ ಕೇಂದ್ರದಿಂದ ಹಣವನ್ನು ಸೂಕ್ತ ಕಾಲಕ್ಕೆ ಪಡೆಯುವುದು ಹೇಗೆಂಬುದು ಗೊತ್ತಿದೆ. ಅವರು ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿಸಿಲ್ಲ ಎಂದು ತಿಳಿಸಿದರು.
ನಾನು ಕರ್ನಾಟಕದ ಸಂಸದೆ, ನನಗೂ ಜವಾಬ್ದಾರಿ ಇದೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿದಿಲ್ಲ. Accountant general ಸಹಿ ಇಲ್ಲದೆ ಹಣ ಕಳಿಸೋಕೆ ಸಾಧ್ಯನಾ? ಇದು ಸತ್ಯ. ಎನ್ ಡಿ ಆರ್ ಎಫ್ ಹಣ ಬಿಡುಗಡೆಗೆ ಒಂದು ಕಮಿಟಿ ಇದೆ. ಕೇಂದ್ರ ಗೃಹ ಸಚಿವರು ಅದನ್ನ ನೋಡ್ತಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಂದು ಭೇಟಿ ಮಾಡಿದ್ದರು. ನಾನು ಅವರಿಗೆ ವಿವರಣೆ ನೀಡಿದ್ದೇನೆ. ಎಸ್ ಡಿಆರ್ ಎಫ್ ಹಣ ರಾಜ್ಯ ಸರ್ಕಾರದ ಬಳಿ ಇದೆ. ಹಣ ಹಾಗೆ ಬರುವುದಿಲ್ಲ. ಕೇಂದ್ರ ತಂಡ ಬಂದು ಪರಿಶೀಲನೆ ಮಾಡಿ ವರದಿ ನೀಡಿದೆ. ಹೈಪವರ್ ಕಮಿಟಿ ಅದನ್ನು ಮುಂದೆ ನೋಡುತ್ತದೆ. ಹೈಪವರ್ ಕಮಿಟಿ ತೀರ್ಮಾನ ಮಾಡಿದ ತಕ್ಷಣವೇ ರಾಜ್ಯಕ್ಕೆ ಪರಿಹಾರ ಬರಲಿದೆ. ಅದನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ ಎಂದರು.