ಪರೇಶ್ ಮೇಸ್ತಾ ಆಕಸ್ಮಿಕ ಸಾವು ಎಂದ ಸಿಬಿಐ: ಅಂದು ಶವ ರಾಜಕೀಯ ಮಾಡಿದ್ದ ಬಿಜೆಪಿ, ಸಂಘಪರಿವಾರಕ್ಕೆ ಮುಖಭಂಗ

Prasthutha|

ಬೆಂಗಳೂರು: ಪರೇಶ್ ಮೇಸ್ತಾ ಎಂಬ ಮೀನುಗಾರ ಯುವಕ 2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ಕಾಣೆಯಾಗಿದ್ದ. ನಗರದ ಶನಿದೇವಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಮೇಸ್ತಾ ಶವವಾಗಿ ಪತ್ತೆಯಾಗಿದ್ದನ್ನೇ ಸಂಘಪರಿವಾರ ಹಾಗೂ ಬಿಜೆಪಿ, ಯುವಕನನ್ನು ಮುಸ್ಲಿಮರು ಹತ್ಯೆ ಮಾಡಿದ್ದಾರೆಂದು ಆರೋಪಿಸಿತ್ತು. ಅಲ್ಲದೆ ಮೇಸ್ತಾನನ್ನು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿ ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿತ್ತು.

- Advertisement -

ಸಂಘಪರಿವಾರದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶೋಭಾ ಕರಂದ್ಲಾಜೆ “ಹಿಂದಿನ ದಿನ ದೇವಸ್ಥಾನದಲ್ಲಿ ಮೇಸ್ತಾ ಚಂಡೆ ಭಾರಿಸುತ್ತಿದ್ದ. ಯಾರು ಚಂಡೆ ಹೊಡೆಯುತ್ತಿದ್ದಾನೆ ಎಂದು ಮುಸಲ್ಮಾನ ಗೂಂಡಾಗಳು ಗಮನಿಸಿಕೊಂಡು ಹೋಗಿದ್ದರು. ಡಿಸೆಂಬರ್ ಆರನೇ ತಾರೀಕು ತನ್ನ ಸ್ನೇಹಿತನ ಬೈಕ್ ತರುವುದಾಗಿ ಎಲ್ಲರಿಗೂ ಹೇಳಿ ಮೇಸ್ತಾ ಹೊರಗೆ ಹೋಗಿದ್ದನು. ಆಚೆ ಹೋದವನು ವಾಪಸ್ ಬಂದಿಲ್ಲ” ಎಂದು ಕಥೆ ಕಟ್ಟಿದ್ದರು.

“ಈಶ್ವರಪ್ಪನವರ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಜಿಹಾದಿಗಳ ಪರವಾಗಿ ಸರ್ಕಾರ ಹಾಗೂ ಪೊಲೀಸರೇ ನಿಂತು ಹಿಂದೂಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದನ್ನು ರಾಜ್ಯಪಾಲರಿಗೆ ವಿವರ ನೀಡಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ನಡೆಯುತ್ತಿರುವ ಘಟನೆಗಳಿಗೆ ರಾಜ್ಯ ಸರ್ಕಾರವೇ ಪ್ರಮುಖ ಕಾರಣ. ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತ ಷಡ್ಯಂತರದ ಗುಮಾನಿ ಆ ಭಾಗದ ಜನರಿಗೆ ಬರುತ್ತಿದೆ. ಮೀನುಗಾರರ ಜನಾಂಗ ಕಷ್ಟಪಟ್ಟು ಜೀವನ ಮಾಡುತ್ತಿದ್ದು, ಧರ್ಮದ ಬಗ್ಗೆ ನಿಷ್ಠೆಯನ್ನು ಹೊಂದಿದೆ. ಅಂತಹ ಸಮುದಾಯದ ಯುವಕನನ್ನು ಜಿಹಾದಿಗಳು ಅಮಾನುಷ ಹಾಗೂ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆದರೂ ಏನೂ ಆಗಿಲ್ಲ ಎಂಬ ರೀತಿ ಸರ್ಕಾರ ವರ್ತನೆ ಮಾಡುತ್ತಿದೆ” ಎಂದು ಖಾಸಗಿ ಮಾಧ್ಯಮವೊಂದಕ್ಕೆ ಅವರು ಹೇಳಿಕೆ ನೀಡಿದ್ದರು. ಈ ಹತ್ಯೆಯಲ್ಲಿ ಪಿಎಫ್ ಐ, ಎಸ್ ಡಿಪಿಐ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ್ದರು.

- Advertisement -

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಪರಿವಾರದ ಶರಣ್ ಪಂಪ್ ವೆಲ್ “ಯಾವುದೋ ಒಂದು ಬಗೆಯ ಎಣ್ಣೆಯನ್ನು ದೇಹಕ್ಕೆ ಸುರಿದು ಬೆಂಕಿ ಕೊಟ್ಟಂತೆ, ತಲೆಗೆ ರಾಡ್ ನಿಂದ ಹೊಡೆದ ರೀತಿಯಲ್ಲಿ ಮತ್ತು ಆ ಹೆಣದ ಕೈಯಲ್ಲಿದ್ದ ಶ್ರೀರಾಮನ ಫೋಟೊವನ್ನು ತಲವಾರಿನಿಂದ ಉಜ್ಜಿ ತೆಗೆದಂತಿತ್ತು ಎಂಬ ಮಹಾ ಸುಳ್ಳನ್ನು ಪ್ರತಿಭಟನಕಾರರು ಉದ್ರೇಕವಾಗುವಂತೆ ಹೇಳಿದ್ದರು.
“ಪೊಲೀಸ ವಿಚಾರಣೆ ಪ್ರಕಾರ ಮುಂಚಿನ ದಿನ ಸಣ್ಣ ಅಪಘಾತವಾಯಿತು, ಆ ಬಗ್ಗೆ ಮಾತಿನ ಚಕಮಕಿ ನಡೆಯಿತು. ನಂತರ ಹೊನ್ನಾವರದಲ್ಲಿದ್ದ ಎಲ್ಲಾ ವಿದ್ಯುತ್ ಕಂಬಗಳ ಮತ್ತು ಮನೆಗಳ ಲೈಟ್ ಆಫ್ ಆಯಿತು. ಅಲ್ಲಿಯ ಎಲ್ಲಾ ಮುಸಲ್ಮಾನರು ಮಾರ್ಕೇಟ್ ಗೆ ದಾಳಿ ಮಾಡಿ ಸಿಕ್ಕಿದ ಅಂಗಡಿಗಳನ್ನು ಪುಡಿ ಮಾಡಿದರು. ಆ ಸಮಯದಲ್ಲಿ ನಗರದ ಹೋಟೆಲ್ ಸಮೀಪ ಇಟ್ಟಿದ್ದ ಬೈಕ್ ತರಲು ಹೋದ ಯುವಕ ನಾಪತ್ತೆಯಾದ” ಎಂದು ಶರಣ್ ಪಂಪ್ ವೆಲ್ ಪ್ರತಿಭಟನಾ ಸಭೆಯಲ್ಲಿ ಹೇಳಿದರು.

“ಪರೇಶ್ ಮೇಸ್ತಾ ಹತ್ಯೆಗೆ ನ್ಯಾಯ ಸಿಗದಿದ್ದರೆ, ಹೊನ್ನಾವರವನ್ನು ಬಂದ್ ಮಾಡಲಾಯಿತು, ಕುಮಟಾವನ್ನು ಬಂದ್ ಮಾಡಲಾಯಿತು, ಶಿರಶಿಯನ್ನು ಬಂದ್ ಮಾಡಲಾಯಿತು, ಇವತ್ತು ಸಿದ್ಧಾಪುರವನ್ನು ಬಂದ್ ಮಾಡಲಾಗಿದೆ. ನಾಳೆ ಮಂಗಳೂರನ್ನೂ ಕೂಡಾ ನಾವು ಬಂದ್ ಮಾಡುತ್ತೇವೆ. ಮುಸಲ್ಮಾನರೇ ನೆನಪಿಟ್ಟುಕೊಳ್ಳಿ ನೀವು ಇಸ್ಲಾಮಿಗಾಗಿ ಜಿಹಾದ್ ಮಾಡಿದರೆ ನಾವು ಈ ದೇಶಕ್ಕಾಗಿ ಯುದ್ಧ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇಡೀ ಹಿಂದೂ ಸಮಾಜ ಇದರ ವಿರುದ್ಧ ಎದ್ದು ನಿಂತು ಹೋರಾಟ ಮಾಡಬೇಕೆಂದು” ಶರಣ್ ಬೆಂಕಿ ಉಗುಳಿದ್ದರು. ಮಾತ್ರವಲ್ಲ ಮೇಸ್ತಾ ಹತ್ಯೆ ಪಿಎಫ್ಐ ಕಾರ್ಯಕರ್ತರ ಕೃತ್ಯ ಎಂದು ಆರೋಪಿಸಿದ್ದರು.

“ಪರೇಶ್ ಮೇಸ್ತಾನ ಪ್ರತಿಯೊಂದು ಹನಿ ರಕ್ತಕ್ಕೂ ನ್ಯಾಯ ದೊರಕಿಸದೆ ಬಿಡುವುದಿಲ್ಲ. ಏನು ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ತಾಳ್ಮೆಯನ್ನು ಮೀರಿ ಏನೋ ಮಾಡಿಕೊಳ್ಳುತ್ತೇವೆ ಎಂಬುದು ಸಾಧ್ಯವಾಗುವುದಿಲ್ಲ. ಕೆಳಗಡೆ ಬಿದ್ದಿರುವ ಒಂದೊಂದು ರಕ್ತದ ಹನಿಯ ಪ್ರಜ್ಞೆ ನಮಗಿದೆ. ಏನೇನು ಮಾಡಬೇಕೆಂದು ನಾವು ಖಂಡಿತವಾಗಿಯೂ ಯೋಚನೆ ಮಾಡುತ್ತೇವೆ. ಕೆಳಗಡೆ ಬಿದ್ದಿರುವ ರಕ್ತಕ್ಕೆ ನ್ಯಾಯ ಕೊಡದೆ ಸುಮ್ಮನಿರುವುದಿಲ್ಲ” ಎಂದು ಸಂಸದ ಅನಂತಕುಮಾರ್ ಹೆಗಡೆ ಪ್ರಚೋದನಾಕಾರಿ ಭಾಷಣ ಮಾಡಿದ್ದರು.

ರಾಜ್ಯದ ಹಲವು ಭಾಗಗಳಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಸಂಘಟನೆಗಳು ಪ್ರತಿಭಟನೆ ಮಾಡಿ ಸಿದ್ದರಾಮಯ್ಯ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದ್ದವು. ಆ ಮೂಲಕ ಹಿಂದೂ ಮತಗಳ ಧ್ರುವೀಕರಣಕ್ಕೆ ಯತ್ನಿಸಿದ್ದರು. 2018ರ ಚುನಾವಣೆಯ ಸಂದರ್ಭದಲ್ಲಿ ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಹೊನ್ನಾವರದಲ್ಲಿರುವ ಪರೇಶ್ ಮೆಸ್ತಾ ಅವರ ಮನೆಗೆ ಭೇಟಿ ನೀಡಿದಾಗ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ ಅಂದು ಉಪಸ್ಥಿತರಿದ್ದರು. ಇದೆಲ್ಲದರ ಪರಿಣಾಮವಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ದೊರೆತ್ತಿದ್ದವು.

ಆದರೆ ಇದೀಗ ಪರೇಶ್ ಮೆಸ್ತಾ ಸಾವು ಆಕಸ್ಮಿಕ. ಅವರ ಕೊಲೆಯಲ್ಲ ಎಂದು ಸಿಬಿಐ ವರದಿ ನೀಡಿದೆ. ಆದರೆ ಅಂದು ಉದ್ರೇಕಕಾರಿ ಭಾಷಣ ಮಾಡಿದ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರು ಈಗ ಇಂಗು ತಿಂದ ಮಂಗನಂತಾಗಿದ್ದಾರೆ ಎಂದು ನೆಟ್ಟಿಗರು ಕುಟುಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರ ವಿರುದ್ಧ ನೆಟ್ಟಿಗರು ಹರಿಹಾಯ್ದು ಟ್ವೀಟ್ ಮಾಡುತ್ತಿದ್ದಾರೆ.




Join Whatsapp