ಬೆಂಗಳೂರು: ಸಿಬಿಐ, ಇಡಿಯವರು ದಿನನಿತ್ಯ ನನಗೆ ನೊಟೀಸ್ ನೀಡುತ್ತಿದ್ದಾರೆ. ನಿನ್ನೆ ನನ್ನ ಮಗಳ ಕಾಲೇಜಿಗೆ ಹೋಗಿ ನೋಟೀಸ್ ನೀಡಿದ್ದು, ವಿದ್ಯಾರ್ಥಿಗಳು ಕಟ್ಟಿರುವ ಶುಲ್ಕದ ವಿವರ ಕೇಳಿದ್ದಾರೆ. ಈ ಬಗ್ಗೆ ನಾನೇನು ಹೇಳಲಿ? ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಅಂದರೆ ಅವರು ನನಗೆ ಹೇಗೆಲ್ಲಾ ಕಿರುಕುಳ ನೀಡುತ್ತಿದ್ದಾರೆ ನೀವೇ ಆಲೋಚಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಬಿಐ ನೋಟಿಸ್ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಡಿ ಅಧಿಕಾರಿಗಳ ಮುಂದೆ ಎಲ್ಲ ಉತ್ತರ ನೀಡಿದ್ದೇನೆ. ನ್ಯಾಷನಲ್ ಹೆರಾಲ್ಡ್ ವಿಚಾರವಾಗಿ ಉತ್ತರ ನೀಡಿದ್ದೇನೆ. ಆದರೂ 22 ರಂದು ಇಡಿ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ. ನಾನು ಪ್ರಜಾಧ್ವನಿ ಯಾತ್ರೆ ಮಾಡಲೋ ವಿಚಾರಣೆಗೆ ಹಾಜರಾಗಲೋ? ಆಡಳಿತ ಪಕ್ಷದವರು ಎಷ್ಟು ಸಾವಿರ ಕೋಟಿ ಲೂಟಿ ಹೊಡೆದರೂ ಕೇಳುವುದಿಲ್ಲ. ಈ ವಿಚಾರಣೆ ಏನಿದ್ದರೂ ವಿರೋಧ ಪಕ್ಷಗಳ ನಾಯಕರಿಗೆ ಮಾತ್ರ ಸೀಮಿತ’ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರಿಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರು ಗಾಂಧಿ ಕುಟುಂಬವನ್ನು ಗುರಿಯಾಗಿಸಿ ಏನೆಲ್ಲಾ ಆರೋಪ ಮಾಡುತ್ತಿದ್ದಾರೆ ಎಂದು ನೀವು ನೋಡುತ್ತಿದ್ದೀರಿ. ಮಲ್ಲಿಕಾರ್ಜುನ ಖರ್ಗೆ ಅವರು ಈಗ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ನಿನ್ನೆ ಮೊನ್ನೆ ಬಂದವರಲ್ಲ’ ಎಂದು ತಿಳಿಸಿದರು.
ಪಕ್ಷದ ಟಿಕೆಟ್ ವಿಚಾರವಾಗಿ ಕೇಳಿದಾಗ, ‘ಈಗಾಗಲೇ ಎರಡು ಸಭೆ ಮಾಡಿದ್ದೇವೆ. ಇನ್ನು ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಬೇಕು. ನಮ್ಮ ಪಕ್ಷದ ಪ್ರಕ್ರಿಯೆ ಮೂಲಕ ಟಿಕೆಟ್ ತೀರ್ಮಾನ ಮಾಡಲಾಗುವುದು’ ಎಂದು ತಿಳಿಸಿದರು.