ಬಿಹಾರದ ಮೇವು ಹಗರಣ: 5ನೇ ಪ್ರಕರಣದಲ್ಲೂ ಲಾಲೂ ದೋಷಿ

Prasthutha|

ರಾಂಚಿ: ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಬಹುಕೋಟಿ ಮೇವು ಹಗರಣದ 5ನೇ ಪ್ರಕರಣದಲ್ಲೂ ಅಪರಾಧಿ ಎಂದು ಜಾರ್ಖಂಡ್ ನ ರಾಂಚಿಯ ವಿಶೇಷ ಸಿಬಿಐ ನ್ಯಾಯಾಯಲ ತೀರ್ಪು ನೀಡಿದೆ.

- Advertisement -

ಶಿಕ್ಷೆಯ ಪ್ರಮಾಣ ಇನ್ನಷ್ಟೇ ಘೋಷಣೆ ಮಾಡಬೇಕಿದೆ. ಒಟ್ಟು 950 ಕೋಟಿ ರೂಪಾಯಿ ಹಗರಣದ ನಾಲ್ಕು ಪ್ರಕರಣಗಳಲ್ಲಿ ಈಗಾಗಲೇ ದೋಷಿ ಎಂದು ಸಾಬೀತಾಗಿ ಜೈಲು ಸೇರಿ ಜಾಮೀನಿನಲ್ಲಿ ಹೊರಬಂದಿರುವ ಲಾಲೂ ಪ್ರಸಾದ್ ಯಾದವ್, 5ನೇ ಪ್ರಕರಣದಲ್ಲೂ ದೋಷಿ ಎಂದು ವಿಶೇಷ ಸಿಬಿಐ ಕೋರ್ಟ್ ನ್ಯಾಯಾಧೀಶ ಸಿ.ಕೆ ಶಶಿ ತೀರ್ಪು ನೀಡಿದ್ದಾರೆ. ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂಪಾಯಿ ಹಣ ಅಕ್ರಮವಾಗಿ ಹಿಂಪಡೆದಿದ್ದ ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್ ಪಿತೂರಿಗಾರ ಎಂಬುದು ಸಾಕ್ಷ್ಯಾಧಾರಗಳಲ್ಲಿ ಸಾಬೀತಾಗಿದೆ. ಈ ಮೂಲಕ ಬಿಹಾರದ ಮೇವು ಹಗರಣದ 5 ಪ್ರಕರಣಗಳಲ್ಲೂ ಲಾಲೂ ಪ್ರಸಾದ್ ಯಾದವ್ ದೋಷಿ ಎಂದು ಸಾಬೀತಾಗಿದೆ.

ನ್ಯಾಯಾಧೀಶರು ತೀರ್ಪು ನೀಡುವಾಗ ಲಾಲೂ ಪ್ರಸಾದ್ ಯಾದವ್ ಕೋರ್ಟ್ ಹಾಲ್ ನಲ್ಲಿ ಉಪಸ್ಥಿತರಿದ್ದರು. ಈಗಾಗಲೇ ನಾಲ್ಕು ಪ್ರಕರಣಗಳಲ್ಲಿ ಅಪರಾಧಿಯಾಗಿರುವ 73 ವರ್ಷ ವಯಸ್ಸಿನ ಲಾಲೂ ಪ್ರಸಾದ್ ಯಾದವ್ 2017ರ ಡಿಸೆಂಬರ್ ನಲ್ಲಿ ರಾಂಚಿಯ ಜೈಲು ಸೇರಿದ್ದರು. ಆರೋಗ್ಯ ಸಮಸ್ಯೆಯ ಕಾರಣಕ್ಕೆ ರಾಂಚಿಯ ರಾಜೇಂದ್ರ ಮೆಡಿಕಲ್ ಸೈನ್ಸ್ ಗೆ ದಾಖಲಾಗಿದ್ದ ಅವರನ್ನು ಕಳೆದ ವರ್ಷದ ಜನವರಿ ತಿಂಗಳಲ್ಲಿ ದೆಹಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಜಾಮೀನಿನ ಮೇಲೆ ಸೆರೆವಾಸದಿಂದ ಮುಕ್ತಿ ಪಡೆದಿದ್ದ ಲಾಲೂ ಪ್ರಸಾದ್, ಮತ್ತೊಮ್ಮೆ ಜೈಲು ಸೇರಲಿದ್ದಾರೆ. ಈಗಾಗಲೇ ನಾಲ್ಕು ಪ್ರಕರಣಗಳಲ್ಲಿ ಮೇಲ್ಮನವಿ ಹೋಗಿರುವ ಲಾಲೂ ಐದನೇ ಪ್ರಕರಣದಲ್ಲೂ ಮೇಲ್ಮನವಿ ಸಲ್ಲಿಸುವುದು ನಿಚ್ಚಳವಾಗಿದೆ.

Join Whatsapp