►ಅರ್ಜಿಯಲ್ಲಿ ರಾಜ್ಯ ಸರ್ಕಾರ ಇಟ್ಟ ಬೇಡಿಕೆಯೇನು?
ಬೆಂಗಳೂರು: ರಾಜ್ಯಾದ್ಯಂತ ಕಾವೇರಿ ವಿವಾದ ಭುಗಿಲೆದ್ದಿದೆ. ಈ ಹಿನ್ನೆಲೆ ಈಗಾಗಲೇ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಆದೇಶವನ್ನು ಎತ್ತಿ ಹಿಡಿದಿರುವ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ (CWMA) ನಿರ್ಧಾರವನ್ನು ಮರು ಪರಿಶೀಲಿಸುವಂತೆ ಇದೀಗ ರಾಜ್ಯ ಸರ್ಕಾರ ಪ್ರಾಧಿಕಾರ ಹಾಗೂ ಸುಪ್ರಿಂಕೋರ್ಟ್ಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಿದೆ. ಅದರಲ್ಲಿ ಎರಡು ಬೇಡಿಕೆಗಳನ್ನು ಇಡಲಾಗಿದೆ.
ನೀರು ಬಿಡಲು ಸಾಧ್ಯವಿಲ್ಲ ಹಾಗೂ ಮೇಕೆದಾಟು ಯೋಜನೆಗೆ ಅನುಮತಿ ಕೊಡಬೇಕು ಎಂದು ಬೇಡಿಕೆ ಇಡಲಾಗಿದೆ.
ಇನ್ನು ಕಾವೇರಿ ಕಾನೂನು ಹೋರಾಟ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ(ಸೆ.29) ಹಿರಿಯ ನ್ಯಾಯಾಧೀಶರು, ನಿವೃತ್ತ ನ್ಯಾಯಮೂರ್ತಿಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ಸಭೆಯಲ್ಲಿ ಕಾನೂನಿನ ಹೋರಾಟ ಮುಂದುವರೆಸುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಇಂದು ಅರ್ಜಿ ಸಲ್ಲಿಸಿದೆ. ಇನ್ನು ನಿನ್ನೆ ನಡೆದ ಸಭೆಯಲ್ಲಿ ರಾಜ್ಯದ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಿ. ಪ್ರಾಧಿಕಾರದ ಆದೇಶ ಪಾಲನೆ ಅಸಾಧ್ಯ ಎಂದು ಹೇಳಿ. ಡ್ಯಾಂಗಳ ಮತ್ತು ಬೆಳೆಯ ಜಮೀನಿನ ಫೋಟೋ ಮತ್ತು ವಿಡಿಯೋಗಳನ್ನು ಕೋರ್ಟ್ಗೆ ಸಲ್ಲಿಸಿ ಎಂದು ಸಲಹೆ ಕೂಡ ನೀಡಿದ್ದಾರೆ.