ಹೊಸದಿಲ್ಲಿ ಜುಲೈ 26: ಇಸ್ರೇಲ್ ಮೂಲದ ಪೆಗಾಸೆಸ್ ಸಂಸ್ಥೆಗಳ ಸ್ಪೈವೇರ್ ಮೂಲಕ ದೇಶದ ಗಣ್ಯ ವ್ಯಕ್ತಿಗಳ ಫೋನ್ ನಂಬರ್ ಕಣ್ಗಾವಲಿನಲ್ಲಿಟ್ಟಿರುವ ಅರೋಪದ ಕುರಿತು ಸುಪ್ರೀಮ್ ಕೋರ್ಟ್ ನ್ಯಾಯಾಧೀಶರು ಮೇಲ್ವಿಚಾರಣೆ ನಡೆಸಬೇಕೆಂದು ಕಾಂಗ್ರೆಸ್ ಮುಖಂಡ ಹಾಗೂ ಐಟಿ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿ ತರೂರ್ ಒತ್ತಾಯಿಸಿದ್ದಾರೆ.
ಸರ್ಕಾರ ಈ ಕ್ರಮಕ್ಕೆ ಮುಂದಾಗುವವರೆಗೆ ವಿರೋಧ ಪಕ್ಷಗಳು ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಅಡ್ಡಿಪಡಿಸಲಿದೆಯೆಂದು ಅವರು ತಿಳಿಸಿದರು. ಮಾತ್ರವಲ್ಲದೆ ಸರ್ಕಾರವು ತನ್ನ ಸ್ವಾರ್ಥ ರಾಜಕೀಯ ಹಿಸಾಸಕ್ತಿಗಳಿಗಾಗಿ ಸಾವಜನಿಕರ ಹಣವನ್ನು ಬಳಸಿಕೊಂಡಿರುವುದು ದುರಂತವೆಂದು ಆರೋಪಿಸಿದರು.
ಪೆಗಾಸೆಸ್ ಕದ್ದಾಲಿಕೆಯ ಮೂಲಕ ಗಣ್ಯರ ಮತ್ತು ರೈತರ ವಿಷಯಗಳನ್ನು ಕಣ್ಗಾವಲಿನಲ್ಲಿಟ್ಟಿರುವ ಕುರಿತು ಮನ್ಸೂನ್ ಅಧಿವೇಶನದ ವೇಳೆ ಸರ್ಕಾರದ ವಿರುದ್ದ ಪ್ರತಿಪಕ್ಷಗಳು ಘೋಷಣೆ ಮತ್ತು ಫಲಕಗಳನ್ನು ಹಿಡಿದು ದ್ವನಿಯೆತ್ತಿರುವುದು ವ್ಯಾಪಕ ಕೋಲಾಹಲಕ್ಕೆ ಸಾಕ್ಷಿಯಾಗಿತ್ತು. ಈ ಹಿನ್ನೆಲೆಯಲ್ಲಿ ಉಭಯ ಸದನಗಳನ್ನು ಒಂದು ದಿನಕ್ಕೆ ಮುಂದೂಡಲಾಯಿತು. ಲೋಕಸಭೆಯ ಸಂಸತ್ ಅಧಿವೇಶವನ್ನು ಮುಂದೂಡಿದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ನಮ್ಮ ಬೇಡಿಕೆಯನ್ನು ಸರ್ಕಾರ ಆಲಿಸಲು ತಯಾರಿಲ್ಲದಿದ್ದಾಗ ನಾವು ಯಾಕೆ ಅವರೊಂದಿಗೆ ಸಹಕರಿಸಬೇಕೆಂದು ಕೇಳಿದರು.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಇತರ ವಿರೋಧ ಪಕ್ಷಗಳಿಗೆ ಸೇರಿದ ರಾಜ್ಯಸಭಾ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಸದನದ ಬಾವಿಗೆ ಇಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.