ಕೋವಿಡ್ ನಿಯಂತ್ರಣ ಕಾಯ್ದೆ ಉಲ್ಲಂಘನೆಗಾಗಿ ಮೊಕದ್ದಮೆ ದಾಖಲು: ಗೃಹ ಸಚಿವ ಅರಗ ಜ್ಞಾನೇಂದ್ರ

Prasthutha|

ಬೆಂಗಳೂರು: ಕೊವಿಡ್ ಸೋಂಕಿನ ನಡುವೆಯೂ ಪಾದಯಾತ್ರೆಯನ್ನು ಕೈಗೊಳ್ಳುವುದರ ಮೂಲಕ ಕಾಂಗ್ರೆಸ್ ನಾಯಕರು ಜನರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ರವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ರಾಮನಗರ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಲಿದೆ. ಕಾಂಗ್ರೆಸ್ ನಾಯಕರು ನೀರಿನ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ನಾವು ಸಾರ್ವಜನಿಕರ ಆರೋಗ್ಯದ ಮೇಲೆ ಕಾಳಜಿ ವಹಿಸಬೇಕಾಗಿದೆ ಎಂದು ತಿಳಿಸಿದರು.

ಕೊರೋನಾ ಸೋಂಕು ಉಲ್ಬಣಗೊಂಡು ಜನತೆ ಸಂಕಷ್ಟಕ್ಕೆ ಸಿಲುಕಿದರೆ ಕಾಂಗ್ರೆಸ್ ನಾಯಕರು ಹೊಣೆ ಹೊಣೆ ಹೊರಬೇಕಾಯಿತು ಎಂದು ಎಚ್ಚರಿಸಿದ ಗೃಹ ಸಚಿವರು, “ ಕಾಂಗ್ರೆಸ್ ನಡಿಗೆ ನಾಡಿನ ಜನತೆಯೂ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ನ ಈ ನಡವಳಿಕೆ ಅತ್ಯಂತ ಹೊಣೆಗೇಡಿತನ ಎಂದು ತಿಳಿಸಿದರು.

- Advertisement -

ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಜಿಲ್ಲಾಡಳಿತ ನಿಭಾಯಿಸಲಿದೆ ಎಂದು ಹೇಳಿದ ಸಚಿವರು, ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರು ನ್ಯಾಯಾಲಯದಲ್ಲಿ ಉತ್ತರಿಸಲಿ ಎಂದು ಅರಗ ಜ್ಞಾನೇಂದ್ರ ಹೇಳಿದರು.

ಸದ್ಯ ಕಾಂಗ್ರೆಸ್ ನೀರಿನ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ. ಆದರೆ ಬುದ್ದಿವಂತ ಜನತೆ, ಇವರ ನಾಟಕವನ್ನು ಅರ್ಥೈಸಲಿದ್ದಾರೆ ಎಂದು ತಿಳಿಸಿದರು. ಮೇಕೆದಾಟು ಯೋಜನೆ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ ನಿರ್ಲಕ್ಷ ತೋರಿದ್ದಾರೆ. ಪ್ರಸಕ್ತ ಮುಂದಿನ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಟೀಕಿಸಿದರು.

ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದ ಗೃಹ ಸಚಿವರು, ಈ ವಿವಾದ ಸುಪ್ರೀಮ್ ಕೋರ್ಟ್ ನ ಮುಂದಿದೆ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ ಐದು ವರ್ಷದಲ್ಲಿ ಕೇವಲ ಡಿ ಪಿ ಆರ್ ಸಲ್ಲಿಸಿದ್ದು ಬಿಟ್ಟರೆ ಬೇರೆ ಏನೂ ಮಾಡಲಿಲ್ಲ ಎಂದು ಅವರು ಟೀಕಿಸಿದರು.

ಕೋರೋನಾ ನಿಬಂಧನೆಗಳನ್ನು ಪಾಲಿಸುವುದಿಲ್ಲ. ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ನಮ್ಮನ್ನು ಜೈಲಿಗೆ ಹಾಕಿ ಎಂದು ಕಾಂಗ್ರೆಸ್ ಸವಾಲು ಎಸೆದಿದ್ದಾರೆ. ಇದು ಅವರ ಉದ್ಧಟತನವನ್ನು ತೋರಿಸುತ್ತದೆ ಎಂದು ಸಚಿವರು ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ಜನ ಸಾಮಾನ್ಯರು ಜಿಗುಪ್ಸೆಗೊಂಡಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.



Join Whatsapp