ನೈತಿಕ ಪೊಲೀಸ್ ಗಿರಿ, ಆಟೋ ಚಾಲಕನ ಮೇಲೆ ಗಂಭೀರ ಹಲ್ಲೆ

Prasthutha|

ಹಲ್ಲೆಗೊಳಗಾದ ವ್ಯಕ್ತಿಯ ಮೇಲೆಯೇ ಪ್ರಕರಣ ದಾಖಲು!

- Advertisement -

ಕೊಡಗು: ತನ್ನ ಪರಿಚಯದ ಮಹಿಳೆ ಜೊತೆಗೆ ಮಾತನಾಡಿದ ವಿಚಾರದಲ್ಲಿ ಆಟೋ ಚಾಲಕನ ಮೇಲೆ ಗುಂಪೊಂದು ಅನೈತಿಕ ಪೊಲೀಸ್ ಗಿರಿ ನಡೆಸಿ, ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ಆಟೋ ಚಾಲಕ ಗಂಭೀರ ಗಾಯಗಳೊಂದಿಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆಗೊಳಗಾದ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ನಡೆದಿದೆ.

ಜನವರಿ 8ರಂದು ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಗೆ ಆಟೋ ಬಾಡಿಗೆಗೆ ತೆರಳಿ ವಾಪಸ್ ಬರುತ್ತಿದ್ದ ಸಂದರ್ಭ ತನ್ನ ಪರಿಚಯದ ಮಹಿಳೆ ಜೊತೆಗೆ ಮಾತನಾಡುತ್ತಿದ್ದಂತೆ ಸ್ಥಳಕ್ಕೆ ಬಂದ ಮಹಿಳೆಯ ಗಂಡ ಅನೀಶ್ ಮತ್ತು ಆತನ ಜೊತೆಗಿದ್ದ ಪ್ರಸಾದ್, ನೌಫಲ್ ಒಳಗೊಂಡ ಗುಂಪೊಂದು ಚಾಲಕ ಸಿಯಾಬುದ್ದೀನ್ ಮೇಲೆ ಗಂಭೀರ ಸ್ವರೂಪದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಚಾಲಕನಿಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಆಟೋ ಚಾಲಕನ ದೂರಿನ ಮೇರೆಗೆ ಅನೀಷ್, ಪ್ರಸಾದ್, ನೌಫಲ್ ಹಾಗೂ ಇತರರ ಮೇಲೆ ಲಘು ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿರುವ ಸಿದ್ದಾಪುರ ಪೊಲೀಸರು, ಚಾಲಕನ ಪರಿಚಯದ ಮಹಿಳೆಯ ದೂರಿನ ಆಧಾರದಲ್ಲಿ ಆಟೋ ಚಾಲಕನ ವಿರುದ್ಧ ಕಠಿಣ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಕಾನೂನನ್ನು ಕೈಗೆತ್ತಿಗೊಳ್ಳಲು ಯಾರಿಗೂ ಅವಕಾಶ ಇಲ್ಲದಿದ್ದರೂ, ನೈತಿಕ ಪೊಲೀಸ್ ಗಿರಿ ನಡೆಸಿ, ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಪೊಲೀಸರು ನೈತಿಕ ಪೊಲೀಸ್ ಗಿರಿ ಮಾಡಿದವರ ಪಿತೂರಿಯಿಂದ ಚಾಲಕನ ಪರಿಚಯದ ಮಹಿಳೆಯಿಂದ ದೂರು ಕೊಡಿಸುವ ಮೂಲಕ ಹಲ್ಲೆಗೊಳಗಾದ ವ್ಯಕ್ತಿಯ ಮೇಲೆಯೇ ಕಠಿಣ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಸರಿಯಾದ ಕ್ರಮವಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೈತಿಕ ಪೊಲೀಸ್ ಗಿರಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಪುಂಡರ ಗುಂಪಿನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Join Whatsapp