‘ಆದಿಪುರುಷ್’ ಸಿನೆಮಾದಲ್ಲಿ ರಾವಣನ ‘ಮಾನವೀಯತೆ’ ಕುರಿತ ಹೇಳಿಕೆಗೆ ನಟ ಸೈಫ್ ಅಲಿ ಖಾನ್ ವಿರುದ್ಧ ಕೇಸ್

Prasthutha|

ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್ ‘ಆದಿಪುರುಷ್’ ಸಿನೆಮಾದ ಕುರಿತು ನೀಡಿದ್ದ ಹೇಳಿಕೆಯೊಂದು ಈಗ ವಿವಾದಕ್ಕೆ ಕಾರಣವಾಗಿದೆ. ರಾವಣನ ‘ಮಾನವೀಯತೆ’ ಕುರಿತ ಹೇಳಿಕೆಗೆ ಸಂಬಂಧಿಸಿ ಕೆಲವರು ವಿವಾದವನ್ನು ಸೃಷ್ಟಿಸಿದ್ದಾರೆ.

- Advertisement -

ತನ್ನ ಹೇಳಿಕೆಯ ಬಗ್ಗೆ ನಟ ಸೈಫ್ ಕ್ಷಮೆಯಾಚಿಸಿದ್ದರೂ, ಕೆಲವರು ವಿವಾದವನ್ನು ಸೃಷ್ಟಿಸಿದ್ದಾರೆ. ಉತ್ತರ ಪ್ರದೇಶ ಮೂಲದ ನ್ಯಾಯವಾದಿಯೊಬ್ಬರು ನಟ ಸೈಫ್ ಮತ್ತು ನಿರ್ದೇಶಕ ಓಂ ರಾವತ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

“ನನಗೆ ನನ್ನ ಹೇಳಿಕೆಯೊಂದರಿಂದ ವಿವಾದ ಸೃಷ್ಟಿಯಾಗಿದೆ ಮತ್ತು ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದು ಗೊತ್ತಾಗಿದೆ. ನನ್ನ ಹೇಳಿಕೆಯ ಉದ್ದೇಶ ಇದಾಗಿರಲಿಲ್ಲ. ನಾನು ಪ್ರತಿಯೊಬ್ಬರಲ್ಲೂ ಕ್ಷಮೆಯಾಚಿಸಿ ಹೇಳಿಕೆ ಹಿಂಪಡೆಯುತ್ತೇನೆ. ಶ್ರೀರಾಮ ನನಗೆ ಯಾವಾಗಲೂ ಹೀರೋಯಿಸಂನ ಸಂಕೇತವಾಗಿದ್ದಾನೆ. ಆದಿಪುರುಷ್ ಕೆಟ್ಟದರ ವಿರುದ್ಧ ಒಳ್ಳೆಯದರ ಜಯದ ಕತೆಯನ್ನು ಹೊಂದಿದೆ. ಯಾವುದೇ ತಿರುಚುವಿಕೆ ಇಲ್ಲದೆ, ಸಿನೆಮಾ ತಯಾರಿಯಲ್ಲಿ ಇಡೀ ತಂಡ ಕಾರ್ಯ ನಿರ್ವಹಿಸುತ್ತದೆ’’ ಎಂದು ಸೈಫ್ ಹೇಳಿದ್ದಾರೆ.

- Advertisement -

ನ್ಯಾಯವಾದಿಯ ಪ್ರಕರಣಕ್ಕೆ ಸಂಬಂಧಿಸಿ ಡಿ.23ರಂದು ಜಾನ್ಪುರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಆದಿಪುರುಷ ಶ್ರೀರಾಮನ ಕುರಿತ ಕತೆಯಾಗಿದ್ದು, ಸೈಫ್ ಅಲಿ ಖಾನ್ ರಾವಣನಿಗೆ ಹೋಲುವ ಪಾತ್ರ ನಿರ್ವಹಿಸುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಸೈಫ್, ರಾವಣನ ಸಹೋದರಿಯ ಮೂಗು ಲಕ್ಷ್ಮಣ ಕತ್ತರಿಸಿದುದರಿಂದ, ರಾವಣ ಸೀತೆಯನ್ನು ಅಪಹರಿಸಿದ್ದ. ರಾವಣನ ದಯೆ ಮತ್ತು ಮಾನವೀಯತೆ ಕುರಿತು ಬಿಂಬಿಸಲಾಗುತ್ತದೆ ಎಂದು ಹೇಳಿದ್ದರು.

ಪ್ರಭಾಸ್ ಮತ್ತು ಕೃತಿ ಸನೊನ್ ನಟಿಸುತ್ತಿರುವ ‘ಆದಿಪುರುಷ್’ 2022 ಆ.11ಕ್ಕೆ ಬಿಡುಗಡೆಯಾಗಲಿದೆ.

Join Whatsapp