ಬಹಳ ವರ್ಷ ಜನರನ್ನು ಯಾಮಾರಿಸಲು ಸಾಧ್ಯವಿಲ್ಲ, ಇಂದಲ್ಲ ನಾಳೆ ಜನ ಬಿಜೆಪಿ ಕುರಿತ ಭ್ರಮೆಯಿಂದ ಹೊರಬರುತ್ತಾರೆ: ರಾಮಲಿಂಗಾ ರೆಡ್ಡಿ

Prasthutha|

ಬೆಂಗಳೂರು: ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿ ಜತೆ ಕೆಲಸ ಮಾಡಿದ್ದರು. ಆದರೆ ಬಿಜೆಪಿಯವರು ಅವರ ಪಕ್ಷದ ನಾಯಕರನ್ನು ಸೇರಿಸಿಕೊಂಡು ಅವರ ಪಕ್ಷ ದುರ್ಬಲ ಮಾಡುವ ಪ್ರಯತ್ನ ಮಾಡಿದ್ದಕ್ಕೆ ಮೈತ್ರಿಯಿಂದ ಹೊರಬಂದಿದ್ದಾರೆ. ಇದು ಬಿಜೆಪಿ ನಂಬಿಕೆಗೆ ವಿಶ್ವಾಸಾರ್ಹವಲ್ಲ ಎಂಬ ವಿರೋಧ ಪಕ್ಷಗಳ ಮಾತು ಸತ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

- Advertisement -


ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಲಚಕ್ರ ತಿರುಗುತ್ತಿರುತ್ತದೆ. ಇದರಲ್ಲಿ ಕಾಂಗ್ರೆಸ್ ಹೆಚ್ಚು ಕಾಲ ಅಧಿಕಾರದಲ್ಲಿತ್ತು. ಈಗ ಕಳೆದ ಎಂಟು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಜತೆಗಿದ್ದ ಶಿವಸೇನೆ, ಪಂಜಾಬ್ ಸೇರಿದಂತೆ ಇತರೆ ರಾಜ್ಯಗಳಲ್ಲಿನ ಸ್ಥಳೀಯ ಪಕ್ಷಗಳು ಒಡೆದಿವೆ. ಇಂದು ಬಿಹಾರದಲ್ಲಾಗಿರುವುದು ಮುಂದೆ ಬೇರೆ ರಾಜ್ಯಗಳಲ್ಲಿ ಆಗಲಿದೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತಿದ್ದವರು ಬಿಜೆಪಿ ಮುಕ್ತ ಭಾರತ ಆಗುವ ಕಾಲ ಇಂದಲ್ಲಾ ನಾಳೆ ಬರುತ್ತದೆ. ಅವನತಿ ಆರಂಭವಾಗಲಿದೆ. ಬಿಜೆಪಿ ಕೆಲಸ ಮಾಡಿ ಅಧಿಕಾರಕ್ಕೆ ಬಂದಿಲ್ಲ. ಬೇರೆ ಕಾರಣಗಳಿಂದಾಗಿ ಅಧಿಕಾರದಲ್ಲಿದ್ದಾರೆ. ಜನರಿಗೆ ಭದ್ರತೆ ಇಲ್ಲ, ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಜ್ವಲಂತ ಸಮಸ್ಯೆಗಳಿಗೆ ದೇಶದ ಶೇ.95ರಷ್ಟು ಜನ ಸಿಲುಕಿದ್ದಾರೆ. ಎಲ್ಲರನ್ನು ಬಹಳ ವರ್ಷಗಳ ಕಾಲ ಯಾಮಾರಿಸಲು ಸಾಧ್ಯವಿಲ್ಲ. ಇಂದಲ್ಲ ನಾಳೆ ಜನ ಬಿಜೆಪಿ ಕುರಿತ ಭ್ರಮೆಯಿಂದ ಆಚೆ ಬರುತ್ತಾರೆ’ ಎಂದು ಉತ್ತರಿಸಿದರು.



Join Whatsapp